ಮಂಗಳೂರು ಪ್ರೆಸ್ ಕ್ಲಬ್ನ ನವೀಕೃತ ‘ಅಕ್ಷರ ಸಭಾಂಗಣ’ ಉದ್ಘಾಟನೆ
ಮಾಧ್ಯಮದ ನೈತಿಕ ಮೌಲ್ಯಗಳ ರಕ್ಷಣೆ ಪತ್ರಕರ್ತರ ಹೊಣೆ – ಡಾ. ಎಂ. ಮೋಹನ್ ಆಳ್ವ

ರಾಜಕೀಯ, ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮೌಲ್ಯಗಳು ಮತ್ತು ಪಾವಿತ್ರ್ಯತೆ ಕುಸಿಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮ ತನ್ನ ನೈತಿಕ ಜವಾಬ್ದಾರಿಯನ್ನು ಮರೆಯದೆ, ಮಾಧ್ಯಮದ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರು ಬದ್ಧರಾಗಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಅಕ್ಟೋಬರ್ 14ರಂದು ಬುಧವಾರ ಮಂಗಳೂರು ಪ್ರೆಸ್ ಕ್ಲಬ್ನ ನವೀಕೃತ ‘ಅಕ್ಷರ ಸಭಾಂಗಣ’ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಅವರು ಮಾತನಾಡಿದರು.


ಸಮಾಜದಲ್ಲಿನ ಲೋಪದೋಷಗಳನ್ನು ಎತ್ತಿತೋರಿಸುವುದರ ಜತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿ, ಅಗತ್ಯ ತಿದ್ದುಪಡಿಗೆ ಪ್ರೇರಣೆ ನೀಡುವ ಮಹತ್ವದ ಜವಾಬ್ದಾರಿ ಪತ್ರಿಕಾ ಮಾಧ್ಯಮಕ್ಕಿದೆ. ಪತ್ರಿಕಾ ಧರ್ಮ ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.


ನವೀಕೃತ ‘ಅಕ್ಷರ ಸಭಾಂಗಣ’ವನ್ನು ಉದ್ಘಾಟಿಸಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಮಾಧ್ಯಮದ ಕೊಡುಗೆ ಮಹತ್ವದ್ದಾಗಿದೆ ಎಂದರು.
ನಗರದ ರಸ್ತೆಗಳ ದುಸ್ಥಿತಿ ಸೇರಿದಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾಧ್ಯಮಗಳು ವರದಿಗಳ ಮೂಲಕ ಬೆಳಕಿಗೆ ತಂದಾಗ, ಅವುಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯುತ್ತದೆ. ನಾಡಿನ ಅಭಿವೃದ್ಧಿಯಲ್ಲಿ ಪತ್ರಕರ್ತರು ಸಕ್ರಿಯ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.

ಮಂಗಳೂರು ಪ್ರೆಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷ ಕೆ. ಆನಂದ ಶೆಟ್ಟಿ ನಾಮಫಲಕ ಅನಾವರಣಗೊಳಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಹಾಗೂ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಬಿ. ರವೀಂದ್ರ ಶೆಟ್ಟಿ ಮತ್ತು ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಅರಿಫ್ ಪಡುಬಿದ್ರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸತೀಶ್ ಇರಾ ಪ್ರಾರ್ಥಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

ನಗರ ಯೋಜನೆ, ಕಟ್ಟಡ ನಿಯಮಗಳ ಬಗ್ಗೆ ಮಾಧ್ಯಮ ನಿಗಾ ಅಗತ್ಯ – ಪಾಲೆಮಾರ್
ನಗರದಲ್ಲಿ ಕಟ್ಟಡ ನಿರ್ಮಾಣ ನಿಯಮಗಳು, ಸೆಟ್ಬ್ಯಾಕ್ ಹಾಗೂ ರಸ್ತೆ ಅಗಲೀಕರಣದಂತಹ ವಿಚಾರಗಳ ಕುರಿತು ಸಮರ್ಪಕ ಅರಿವಿಲ್ಲದೆ ಆಡಳಿತ ವ್ಯವಸ್ಥೆ ನಿರ್ಧಾರಗಳನ್ನು ಕೈಗೊಂಡರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳು ಎದುರಾಗಬಹುದು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಎಚ್ಚರಿಸಿದರು. ನಗರ ಯೋಜನೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಧ್ಯಮಗಳು ನಿರಂತರ ನಿಗಾ ವಹಿಸಿ, ಸಮಸ್ಯೆಗಳನ್ನು ಜನರ ಗಮನಕ್ಕೆ ತರುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.



