ಮೂಡುಬಿದಿರೆಯಲ್ಲಿ ವಿದ್ಯುತ್ ಅವಘಡ: ಮಗ ಶೋನ್ನ ರಕ್ಷಣೆಗೆ ಧಾವಿಸಿದ ತಾಯಿ ಮರ್ಸಿ ಮಸ್ಕರೇನಸ್ಗೂ ವಿದ್ಯುತ್ ಶಾಕ್ – ಇಬ್ಬರೂ ದುರ್ಮರಣ!
ಮಗನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಪ್ರವಹಿಸಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ 45 ವರ್ಷ ಪ್ರಾಯದ ಮರ್ಸಿ ಮಸ್ಕರೇನಸ್ ಮತ್ತು ಅವರ ಪುತ್ರ 18 ವರ್ಷ ಪ್ರಾಯದ ಶೋನ್ ಮಸ್ಕರೇನಸ್ ಮೃತಪಟ್ಟಿದ್ದಾರೆ.

ಮಾಹಿತಿಯ ಪ್ರಕಾರ, ಶೋನ್ ಬಟ್ಟೆ ಒಣಗಿಸುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದ್ದು, ಮಗನನ್ನು ರಕ್ಷಿಸಲು ಮುಂದಾದ ತಾಯಿಗೂ ವಿದ್ಯುತ್ ತಗುಲಿದೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಶೋನ್ ಮಸ್ಕರೇನಸ್ ಮೂಡುಬಿದಿರೆಯ ಹೋಲಿ ರೋಸರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಶೋಕ ಆವರಿಸಿದೆ.




