ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವ – ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೊಸ ಕೊಡುಗೆಗಳ ಘೋಷಣೆ
ಉಜಿರೆಯಲ್ಲಿ ನರ್ಸಿಂಗ್, ಫಿಸಿಯೋಥೆರಪಿ ಕಾಲೇಜು ಹಾಗೂ ₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ – ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿ ನಿಲಯ

ಅನ್ನದಾನ, ವಿದ್ಯಾದಾನ, ಅಭಯದಾನ ಹಾಗೂ ಔಷಧದಾನದ ಮೂಲಕ ಸಮಾಜದ ಸರ್ವತೋಮುಖ ಕಲ್ಯಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸೇವೆ ಮತ್ತು ಸಾಧನೆಗಳು ವಿಶ್ವಮಾನ್ಯವಾಗಿವೆ ಎಂದು ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಘವೇಂದ್ರ ಶ್ರೀನಿವಾಸ ಭಟ್ ಶ್ಲಾಘಿಸಿದರು.
ಧರ್ಮಸ್ಥಳದಲ್ಲಿ ಅಕ್ಟೋಬರ್ 24ರಂದು ಶನಿವಾರ ನಡೆದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಅವರು ಶುಭಾಶಂಸನೆ ಮಾಡಿ ಮಾತನಾಡಿದರು.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ನಿಸ್ವಾರ್ಥ ಮನೋಭಾವದಿಂದ ಸಾತ್ವಿಕ ತ್ಯಾಗ ಹಾಗೂ ಬದ್ಧತೆಯೊಂದಿಗೆ ಹೆಗ್ಗಡೆಯವರು ಸಲ್ಲಿಸುತ್ತಿರುವ ಸೇವೆ ಆದರ್ಶಪ್ರಾಯವಾಗಿದೆ. ಧರ್ಮದ ತಳಹದಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು, ಮಹಿಳಾ ಸಬಲೀಕರಣ ಹಾಗೂ ಅಸಹಾಯಕರಿಗೆ ನೆರವಾಗುವ ಮೂಲಕ ಅವರು ಕೈಗೊಂಡಿರುವ ಸಮಾಜಮುಖಿ ಕಾರ್ಯಗಳು ಅನುಕರಣೀಯವಾಗಿವೆ. ಅವರಿಗೆ ನೀಡಿರುವ ‘ರಾಜರ್ಷಿ’ ಬಿರುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮಸ್ಥಳಕ್ಕೂ ಕರ್ಣಾಟಕ ಬ್ಯಾಂಕ್ಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಅವರು, ಹೆಗ್ಗಡೆಯವರು ಹಾಗೂ ಅವರ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಅವರು ಬ್ಯಾಂಕ್ನ ಪ್ರಗತಿಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ರಾಜಯೋಗಿ ಹಾಗೂ ಕರ್ಮಯೋಗಿಯಾಗಿ ಸಮಾಜದ ಕಲ್ಯಾಣಕ್ಕಾಗಿ ಹೆಗ್ಗಡೆಯವರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, ಕೃತಜ್ಞತಾಪೂರ್ವಕವಾಗಿ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೊಸ ಯೋಜನೆಗಳ ಘೋಷಣೆ:
ಪಟ್ಟಾಭಿಷೇಕ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
- ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿಯರಿಗಾಗಿ ನಿಲಯ ನಿರ್ಮಾಣ.
- ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾ ವಸತಿ ನಿಲಯ ಸ್ಥಾಪನೆ.
- ಉಜಿರೆಯಲ್ಲಿ ನರ್ಸಿಂಗ್ ಮತ್ತು ಫಿಸಿಯೋಥೆರಪಿ ಕಾಲೇಜುಗಳ ಆರಂಭ.
- ಶಿಕ್ಷಣ ಸಂಸ್ಥೆಗಳ ಹಳೆಯ ಕಟ್ಟಡಗಳ ನವೀಕರಣ.
- ಉಜಿರೆಯಲ್ಲಿ ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ನಿರ್ಮಾಣ.
- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಅನುಕೂಲಕ್ಕಾಗಿ ಎಟಿಎಂ ಸೌಲಭ್ಯದ ಬಳಕೆಗೆ ವ್ಯವಸ್ಥೆ.
- ಉಜಿರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಆರಂಭ.
- ಕೆರೆಗಳ ಪುನಶ್ಚೇತನಕ್ಕೆ ಕ್ರಮ.

₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್:
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು ₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯವನ್ನು ಆರಂಭಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಈ ಸೌಲಭ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳ ಪತ್ತೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಚಿಕಿತ್ಸೆಗಾಗಿ ನೆರವು ಕೋರಿ ಧರ್ಮಸ್ಥಳಕ್ಕೆ ಆಗಮಿಸುವವರಿಗೆ ಸೂಕ್ತ ಸಹಾಯ ಒದಗಿಸಲಾಗುವುದು ಎಂದೂ ಹೆಗ್ಗಡೆಯವರು ಹೇಳಿದರು. ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆಗಳು ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳ ಮೂಲಕ ಪಾರಂಪರಿಕ ಚಿಕಿತ್ಸಾ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿವರಿಸಿದರು.


ಹಿರಿಯ ನೌಕರರಿಗೆ ಸನ್ಮಾನ, ಕೃತಿ ಬಿಡುಗಡೆ:
ಸಂಸೆ ಹೊಸನೆಲ ಎಸ್ಟೇಟ್ನ ಪ್ರಬಂಧಕ ಶ್ರೀವರ್ಮ ಸೇರಿದಂತೆ 26 ಮಂದಿ ಹಿರಿಯ ನೌಕರರನ್ನು ಹೆಗ್ಗಡೆಯವರು ಸನ್ಮಾನಿಸಿದರು. ಡಾ. ಪವನ್ ರಚಿಸಿರುವ ‘ಮುಹೂರ್ತ ಪದವೀ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್ ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.

ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರೂಪಿಸಿದರು.




