ಪೋಷಕರ ಸಿಬಿಲ್ ಸ್ಕೋರ್ ನೆಪದಲ್ಲಿ ಶಿಕ್ಷಣ ಸಾಲ ನಿರಾಕರಿಸಬೇಡಿ – ಬ್ಯಾಂಕುಗಳಿಗೆ ನಿಸಾರ್ ಅಹಮದ್ ಎಚ್ಚರಿಕೆ
ಉನ್ನತ ಶಿಕ್ಷಣ ಪಡೆಯುವ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲು ಬ್ಯಾಂಕುಗಳು ಅನಗತ್ಯ ಅಡ್ಡಿಪಡಿಸುವಂತಿಲ್ಲ. ಪೋಷಕರ ಸಿಬಿಲ್ ಸ್ಕೋರ್ ಕಡಿಮೆ ಇದೆ ಅಥವಾ ಹಿಂದಿನ ಸಾಲ ಎನ್ಪಿಎ ಆಗಿದೆ ಎಂಬ ಕಾರಣ ನೀಡಿ ವಿದ್ಯಾರ್ಥಿಗಳ ಶಿಕ್ಷಣ ಸಾಲದ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಕ್ಟೋಬರ್ 29ರಂದು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಕೋರಿ ಬ್ಯಾಂಕುಗಳಿಗೆ ಶಿಕ್ಷಣ ಸಾಲದ ಅರ್ಜಿ ಸಲ್ಲಿಸುತ್ತಾರೆ. ಆದರೆ ಕೆಲವು ಬ್ಯಾಂಕುಗಳು ವಿದ್ಯಾರ್ಥಿಗಳ ತಂದೆ-ತಾಯಿಯ ಸಿಬಿಲ್ ಸ್ಕೋರ್ ಹಾಗೂ ಹಿಂದಿನ ಸಾಲಗಳ ಎನ್ಪಿಎ ಸ್ಥಿತಿಯನ್ನು ಮುಂದಿಟ್ಟುಕೊಂಡು ಸಾಲ ನೀಡಲು ನಿರಾಕರಿಸುತ್ತಿರುವ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ. ಇಂತಹ ವರ್ತನೆ ಸರಿಯಲ್ಲ ಎಂದು ಅವರು ತಿಳಿಸಿದರು.
₹7.5 ಲಕ್ಷದವರೆಗಿನ ಶಿಕ್ಷಣ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಒದಗಿಸುವ ವ್ಯವಸ್ಥೆಯಿದ್ದು, ಈ ಕುರಿತು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟ ನಿರ್ದೇಶನಗಳನ್ನು ನೀಡಿವೆ. ಶಿಕ್ಷಣ ಸಾಲ ಮಂಜೂರಾತಿಯಲ್ಲಿ ಬ್ಯಾಂಕುಗಳು ವಿಳಂಬ ಮಾಡಿದರೆ ಅಥವಾ ಅನಗತ್ಯವಾಗಿ ಅರ್ಜಿ ತಿರಸ್ಕರಿಸಿದರೆ ವಿದ್ಯಾರ್ಥಿಗಳು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.

ಮಕ್ಕಳ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚನೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿರುವ ಆರು ವರ್ಷದೊಳಗಿನ ಮಕ್ಕಳ ಸಮಗ್ರ ಅಂಕಿಅಂಶಗಳನ್ನು ಸಂಗ್ರಹಿಸಿ ನಿರ್ವಹಿಸಬೇಕು. ಈ ಮಾಹಿತಿಯನ್ನು ಶಿಕ್ಷಣ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ನಿಸಾರ್ ಅಹಮದ್ ಸೂಚಿಸಿದರು.

ವಸತಿ ಯೋಜನೆಗಳ ಫಲಾನುಭವಿಗಳಿಗೆ ನೆರವು
ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಾಣ ಕೈಗೊಂಡಿರುವ ಫಲಾನುಭವಿಗಳಿಗೆ ಕಾಮಗಾರಿ ಪೂರ್ಣಗೊಳಿಸಲು ಅನುದಾನದ ಕೊರತೆ ಎದುರಾದರೆ, ಉದ್ಯೋಗ ಖಾತರಿ ಯೋಜನೆ ಹಾಗೂ ಕಾರ್ಮಿಕ ಇಲಾಖೆಯ ವಸತಿ ಯೋಜನೆಗಳ ಮೂಲಕ ಅಗತ್ಯ ನೆರವು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆಗೆ ಮೆಚ್ಚುಗೆ:
ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಶಾಂತಿ ಮತ್ತು ನೆಮ್ಮದಿಯ ವಾತಾವರಣ ನೆಲೆಸಿರುವುದಕ್ಕೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೋಮು ಗಲಭೆಗಳಿಲ್ಲದೆ ಶಾಂತಿ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಹಿಸಿರುವ ಪಾತ್ರವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಆಯೋಗದ ನಾಮನಿರ್ದೇಶಿತ ಸದಸ್ಯರಾದ ಝೀನತ್, ಸುಭಾಷ್ ಚೌಟ, ಪೀಟರ್ ಮೆಂಡೋನ್ಸ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




