ಮಂಗಳೂರಿನಲ್ಲಿ LSD ಡ್ರಗ್ಸ್ ಜಾಲ ಪತ್ತೆ – ₹3.35 ಲಕ್ಷ ಮೌಲ್ಯದ ಮಾದಕವಸ್ತು ವಶ
ನಿಹಾಲ್ ರೊಡ್ರಿಗಸ್ ಹಾಗೂ ಸಿದ್ಧಾರ್ಥ ಶೆಟ್ಟಿಯನ್ನು ಬಂಧಿಸಿದ CCB ಪೊಲೀಸರು

ನಿಷೇಧಿತ ಮಾದಕವಸ್ತು LSD (ಲೈಸರ್ಜಿಕ್ ಆಸಿಡ್ ಡೈಈಥೈಲಮೈಡ್) ಅನ್ನು ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ಪತ್ತೆದಳದ (CCB) ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹3 ಲಕ್ಷ ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್ಗಳು ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹3.35 ಲಕ್ಷ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಿಂದ ನಿಷೇಧಿತ ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ನವೆಂಬರ್ 3ರಂದು ಮಂಗಳವಾರ ಮಧ್ಯಾಹ್ನ ಮಂಗಳೂರು ನಗರದ ಪಡೀಲ್ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಬಂಧಿತ ಆರೋಪಿಗಳ ವಿವರ:
ನಿಹಾಲ್ ಸ್ಯಾಂಪ್ರೆಸ್ ರೊಡ್ರಿಗಸ್ (ಪ್ರಾಯ 30 ವರ್ಷ): ಮಂಗಳೂರು, ಪಡೀಲ್, ಅಳಪೆ, ಮಂಗಳೂರು ಸಾಮಿಲ್ ಸಮೀಪದ ತುಂಬೆ ಪ್ಲಾಜಾದ ಫ್ಲಾಟ್ ನಂ. 802ರ ನಿವಾಸಿ.
ಸಿದ್ದಾರ್ಥ ಶೆಟ್ಟಿ (ಪ್ರಾಯ 35 ವರ್ಷ): ಮಂಗಳೂರು, ಉರ್ವಸ್ಟೋರ್, ದಡ್ಡಲ್ಕಾಡ್ನ EMILAY MANSION ಅಪಾರ್ಟ್ಮೆಂಟ್ನ ನಿವಾಸಿ.

ಬಂಧಿತ ನಿಹಾಲ್ ಸ್ಯಾಂಪ್ರೆಸ್ ರೊಡ್ರಿಗಸ್ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು. ಮತ್ತೋರ್ವ ಆರೋಪಿ ಸಿದ್ದಾರ್ಥ ಶೆಟ್ಟಿ ವಿರುದ್ಧ ಮಂಗಳೂರು ನಗರದ ಬರ್ಕೆ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಾದಕವಸ್ತು ಮಾರಾಟ ಮತ್ತು ಸಾಗಾಟದ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




