ಮಂಗಳೂರಿನ ಹಲವೆಡೆ ಗಾಂಜಾ ಮಾರಾಟ – ಆರೋಪಿ ಬಂಧನ
ಕಾರು ಹಾಗೂ ಮೊಬೈಲ್ ಸಹಿತ ₹3.94 ಲಕ್ಷದ ಸೊತ್ತು ವಶ

ಮಂಗಳೂರು ನಗರದಲ್ಲಿ ಅಕ್ರಮ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿ, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ಗಾಂಜಾ ಸೇರಿದಂತೆ ₹3.94 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನವೆಂಬರ್ 5ರಂದು ಗುರುವಾರ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಸೇತುವೆ ಸಮೀಪ ಗಾಂಜಾ ಮಾರಾಟ ಮಾಡಲು ವ್ಯಕ್ತಿಯೊಬ್ಬ ಬಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ಅವರ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡ್ನೂರು ಅಂಚೆ ವ್ಯಾಪ್ತಿಯ ಪಡ್ಡಾಯೂರ್ ಹೌಸ್ ನಿವಾಸಿ 23 ವರ್ಷ ಪ್ರಾಯದ ಮೊಹಮ್ಮದ್ ನಿಸಾರ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಅಂದಾಜು ₹1.90 ಲಕ್ಷ ಮೌಲ್ಯದ 3 ಕೆ.ಜಿ. 800 ಗ್ರಾಂ ಗಾಂಜಾ, ₹4 ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಅಂದಾಜು ₹2 ಲಕ್ಷ ಮೌಲ್ಯದ KL-14-1662 ನೋಂದಣಿ ಸಂಖ್ಯೆಯ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹3.94 ಲಕ್ಷ ಎಂದು ಅಂದಾಜಿಸಲಾಗಿದೆ.


ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಹಾಗೂ ಮಂಗಳೂರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ, ಈ ಹಿಂದೆಯೂ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 137/2026ರ ಅಡಿಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A)ರಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




