July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ

ಮಂಗಳೂರು : ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಪ್ರಮುಖ ಕ್ರೀಡಾ ಕಾರ್ಯಕ್ರಮವಾದ ಕರ್ನಾಟಕ ಕ್ರೀಡಾಕೂಟ 2025 (ರಾಜ್ಯ ಕ್ರೀಡಾಕೂಟ) ವನ್ನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರು ಇಂದು ಜನವರಿ 17ರಂದು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್, MLC ಐವನ್ ಡಿಸೋಜ,  ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ. ಗೋವಿಂದರಾಜು ಮುಂತಾದ ಗಣ್ಯರು ಹಾಜರಿದ್ದರು.

ಕರ್ನಾಟಕ ಕ್ರೀಡಾಕೂಟ 2025 ಇದೇ ಜನವರಿ 23ರವರೆಗೆ ಮುಂದುವರಿಯಲಿದೆ. 23 ಕ್ರೀಡಾ ಕಾರ್ಯಕ್ರಮಗಳಲ್ಲಿ 3,247 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಅಲ್ಲದೆ, 599 ಅಧಿಕಾರಿಗಳು ಈ ಕ್ರೀಡೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಮಂಗಳೂರು ಮತ್ತು ಉಡುಪಿಗಳಲ್ಲಿ ಆಯೋಜಿಸಲಾಗುವ ಕ್ರೀಡಾ ಕಾರ್ಯಕ್ರಮಗಳಲ್ಲಿ ಫುಟ್ಬಾಲ್, ಹಾಕಿ, ಆರ್ಚರಿ (ಬಿಲ್ಲುಗಾರಿಕೆ), ಬಾಕ್ಸಿಂಗ್, ಜಿಮ್ನಾಟಿಕ್ಸ್, ಕೊಕೊ, ಈಜು, ವುಷು, ಕಯಾಕ್ ಮತ್ತು ಕ್ಯಾನೊಯಿಂಗ್, ಅಥ್ಲೆಟಿಕ್ ಕೂಟ, ಸೈಕಲ್ ಸವಾರಿ, ಹ್ಯಾಂಡ್‌ಬಾಲ್, ಲಾನ್ ಟೆನ್ನಿಸ್, ಟೇಬಲ್ ಟೆನಿಸ್, ಕಬ್ಬಡಿ, ಬ್ಯಾಡ್ಮಿಂಟನ್, ಕತ್ತಿ ವರಸೆ(ಫೆನ್ಸಿಂಗ್), ನೆಟ್‌ಬಾಲ್, ಟೇಕ್ವಾಂಡೊ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಜುಡೊ, ಶೂಟಿಂಗ್, ವೇಟ್‌ಲಿಫ್ಟಿಂಗ್ ಮತ್ತು ರೆಸ್ಲಿಂಗ್ (ಕುಸ್ತಿ) ಮುಂತಾದವುಗಳು ಸೇರಿವೆ.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಮಾತನಾಡಿ, “ಕರ್ನಾಟಕ ಕ್ರೀಡಾಕೂಟ 2025”ಕ್ಕೆ ಸುಮಾರು 5 ಕೋಟಿ ರೂಪಾಯಿಗಳನ್ನು ಕರ್ನಾಟಕ ಸರ್ಕಾರ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಬೆಂಬಲವನ್ನು ನೀಡಲು ನಾವು ಇಚ್ಛಿಸುತ್ತೇವೆ. ಇದರಿಂದ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶ ಲಭಿಸಬಹುದಾಗಿದೆ. ರಾಷ್ಟೀಯ ಮತ್ತು ಅಂತಾರಾಷ್ಟೀಯ ಕ್ರೀಡೆಗಳಲ್ಲಿ ಭಾಗವಹಿಸುವ ರಾಜ್ಯದ ಅಥ್ಲೀಟ್‌ಗಳಿಗೆ ಗ್ರೇಸ್ ಮಾರ್ಕ್ ಗಳನ್ನು ನೀಡುವಂತೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ಅವರು ಮಾಡಿರುವ ಮನವಿಯನ್ನು ನಾನು ಸಂಪುಟದ ಮುಂದೆ ಇಡಲಿದ್ದೇನೆ. ಕ್ರೀಡಾ ಸೌಲಭ್ಯಗಳು ಮತ್ತು ಉಪಕರಣಗಳ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ 3 ಕೋಟಿ ನೀಡುವ ಯೋಜನೆಯನ್ನು ನಾನು ಹೊಂದಿದ್ದೇನೆ. ಒಲಂಪಿಕ್ ಕ್ರೀಡೆಗಳಲ್ಲಿ ಪದಕವನ್ನು ಗೆಲ್ಲುವ ರಾಜ್ಯದ ಅಥ್ಲೀಟ್‌ಗಳಿಗೆ ಆರು ಕೋಟಿ ರೂಪಾಯಿಗಳನ್ನು ನಾವು ನೀಡಲಿದ್ದೇವೆ. ಜೊತೆಗೆ ಏಷಿಯನ್ ಕ್ರೀಡೆಗಳು ಮತ್ತು ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಅಥ್ಲೀಟ್‌ಗಳಿಗೆ ತಲಾ 50 ಲಕ್ಷ ರೂಪಾಯಿಗಳನ್ನು ನೀಡಲಿದ್ದೇವೆ’’ ಎಂದರು.

ವಿಧಾನಸಭೆ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರು ಮಾತನಾಡಿ, “ಕರ್ನಾಟಕ ರಾಜ್ಯದ ಎಲ್ಲೆಡೆಯಿಂದ ಬಂದಿರುವ ಎಲ್ಲಾ ಅಥ್ಲೀಟ್‌ಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿಗೆ ನಾನು ಸ್ವಾಗತಿಸುತ್ತೇನೆ. ಈ ಪ್ರದೇಶದ ಅಥ್ಲೀಟ್‌ಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವುದು ಈ ಕ್ರೀಡೆಗಳನ್ನು ಇಲ್ಲಿ ನಡೆಸುವ ಮುಖ್ಯ ಕಾರಣವಾಗಿದೆ. ಈ ಕ್ರೀಡೆಗಳ ಆಯೋಜನೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ನಾನು ವಂದನೆ ಸಲ್ಲಿಸುತ್ತೇನೆ’’ ಎಂದರು.

ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ. ಗೋವಿಂದರಾಜ್ ಅವರು ಮಾತನಾಡಿ, “ದಕ್ಷಿಣ ಕನ್ನಡ ಮತ್ತು ಉಡುಪಿಯ ಅಧಿಕಾರಿಗಳ ಕಠಿಣ ಪರಿಶ್ರಮ ಮತ್ತು ಸಮನ್ವಯ ಕಾರ್ಯದಿಂದಲೇ ಈ ಕ್ರೀಡಾಕೂಟ ನಡೆಯಲು ಸಾಧ್ಯವಾಗಿದೆ. ಒಟ್ಟಾರೆಯಾಗಿ 4500 ಸ್ಪರ್ಧಿಗಳು ಮತ್ತು ಅಧಿಕಾರಿಗಳು ಈ ಕ್ರೀಡೆಗಳ ಭಾಗವಾಗಿರುತ್ತಾರೆ. ರಾಜ್ಯದಲ್ಲಿ ಕ್ರೀಡೆಗೆ ಲಭ್ಯವಾಗುತ್ತಿರುವ ಷರತ್ತುರಹಿತ ಬೆಂಬಲಕ್ಕಾಗಿ ಕ್ರೀಡಾ ಇಲಾಖೆಯನ್ನೂ ನೋಡಿಕೊಳ್ಳುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ವಂದನೆ ಸಲ್ಲಿಸಬೇಕಾಗಿದೆ.  ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ. 3ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ಶೇ. 2ರಷ್ಟು ಉದ್ಯೋಗ ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದ ಇವರು ಉದ್ಯೋಗಗಳಿಗಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿರುವುದಿಲ್ಲ” ಎಂದರು.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್ ಅವರು ಮಾತನಾಡಿ, “ಈ ವರ್ಷ ರಾಜ್ಯ ಕ್ರೀಡಾಕೂಟ ಇಲ್ಲಿ ನಡೆಯುತ್ತಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶಕ್ಕೆ ಗೌರವದ ವಿಷಯವಾಗಿದೆ. ಯುವಜನರನ್ನು ಅಥ್ಲೀಟ್‌ಗಳಾಗಿ ರೂಪಿಸುವುದು ಮಾತ್ರವಲ್ಲದೆ, ಯುವಜನರು ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಕ್ರೀಡೆ ಸಹಾಯ ಮಾಡುತ್ತದೆ. ಇದರಿಂದ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯವಾಗಿರುತ್ತದೆ. ಈ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಎಲ್ಲಾ ಅಥ್ಲೀಟ್‌ಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ತಮ್ಮ ಅತ್ಯುತ್ತಮ ಪ್ರತಿಭೆಗಳನ್ನು ಪ್ರದರ್ಶಿಸಿ ಕರ್ನಾಟಕ ರಾಜ್ಯವು ಭಾರತೀಯ ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರಕಾಶಿಸುವಂತೆ ಮಾಡಬೇಕೆಂದು ಎಲ್ಲಾ ಅಥ್ಲೀಟ್‌ಗಳನ್ನು ನಾನು ಆಗ್ರಹಿಸುತ್ತೇನೆ. ಎಲ್ಲಾ ಸ್ಪರ್ಧಿಗಳಿಗೆ ಶುಭಾಶಯಗಳನ್ನು ಕೋರುತ್ತೇನೆ’’ ಎಂದರು.

ಅದ್ಭುತವಾದ ಸಾಂಸ್ಕೃತಿಕ ರೋಡ್ ಶೋವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಮಂಗಳಾ ಕ್ರೀಡಾಂಗಣದಲ್ಲಿ ಇದು ಮುಕ್ತಾಯವಾಗಿತ್ತು. ಈ ರೋಡ್ ಶೋಗೆ ಟಿಎಂಪೈ ಹಾಲ್‌ನಿಂದ ಸನ್ಮಾನ್ಯ ಯು.ಟಿ. ಖಾದರ್ ಅವರು ಚಾಲನೆ ನೀಡಿದ್ದರು. ಕ್ರೀಡೆಗಳನ್ನು ಸಂಭ್ರಮಿಸಿದ ಈ ಮೆರವಣಿಗೆಯಲ್ಲಿ ಕರ್ನಾಟಕದ ಸಮೃದ್ಧ ಸಂಪ್ರದಾಯಗಳು ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿಯ ರೋಮಾಂಚಕ ಸಂಸ್ಕೃತಿಯನ್ನು ಸಂಭ್ರಮಿಸಿತ್ತು. ಈ ಕಾರ್ಯಕ್ರಮದಲ್ಲಿ ಅಥ್ಲೀಟ್‌ಗಳು ಸ್ಥಳೀಯ ಕ್ರೀಡಾ ಚಾಂಪಿಯನ್‌ಗಳು ಅಲ್ಲದೆ, ಪ್ರದರ್ಶನ ನೀಡಿದ 20 ತಂಡಗಳು ಸೇರಿದ್ದವು. ಉದ್ಘಾಟನಾ ಸಮಾರಂಭ ಈ ಮೆರವಣಿಗೆಯ ನಂತರ ನಡೆದಿತ್ತು. ಉದ್ಘಾಟನೆ ಸಮಾರಂಭದ ನಂತರ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಅಲ್ಲದೆ, ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಕರ್ನಾಟಕ ಕ್ರೀಡಾಕೂಟ 2025ಕ್ಕಾಗಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗಾಯಕ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಅವರ ತಂಡದ ಪ್ರದರ್ಶನ ರಂಜಿಸಿತ್ತು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page