April 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಮುಖವಾಡಗಳಿಲ್ಲದೆ ಬಾಳಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ’ – ದೇರ್ಲ

‘ಕೊರೊನೋತ್ತರ ಸಂದರ್ಭದಲ್ಲಿ ಜಗತ್ತು ಬದಲಾಗಿದೆ. ನಮ್ಮೊಳಗಿನ ಸಂಯಮ, ತಾಳ್ಮೆ, ಸಹನೆ ಎಲ್ಲವೂ ಕಳೆದುಹೋಗಿ ಕೇಳುವ, ಭಾವಿಸುವ ದಿನ ಮರೆಯಾಗುತ್ತಿರುವ ಕ್ಷಣದಲ್ಲಿ ನಮ್ಮ ಮನದೊಳಗೆ ತೇಜಸ್ವಿಯನ್ನು ಬಿತ್ತುವ ಕಾರ್ಯವಾಗಬೇಕಿದೆ’ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾl ನರೇಂದ್ರ ರೈ ದೇರ್ಲ ಅವರು ಹೇಳಿದರು. ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ನಡೆದ ‘ಪೂರ್ಣಚಂದ್ರ ತೇಜಸ್ವಿ ಮತ್ತು ವಿದ್ಯಾರ್ಥಿ ಓದುಗರು’ ಎಂಬ ವಿಷಯದ ಬಗ್ಗೆ ಅತಿಥಿ ಉಪನ್ಯಾಸವನ್ನು ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಪುಸ್ತಕದ ಓದಿನಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಅತೀ ಹೆಚ್ಚು ಯುವ ಜನರಿಂದ ಓದಲ್ಪಡುತ್ತಿರುವವರು ತೇಜಸ್ವಿಯೇ. ಮುಖವಾಡಗಳಿಲ್ಲದೆ ತಾನು ಹೀಗೆಯೇ ಬದುಕಬೇಕು ಎಂದು ಬಯಸಿದಂತೆ ಬದುಕಿದ ಯಾವುದೇ ಮಾದರಿಗಳಿಲ್ಲದೆ ಮಾದರಿಗೆ ಸಡ್ಡು ಹೊಡೆದು ಹೀಗೆಯೂ ಬದುಕಬಹುದು ಎಂದು ತೋರಿಸಿದ ಕನ್ನಡದ ಒಬ್ಬ ಪ್ರಮುಖ ಚಿಂತಕ ತೇಜಸ್ವಿ. ಪರಿಸರವನ್ನು ಅನುಭವಿಸಿ ಬರೆದ ತೇಜಸ್ವಿ ಯಾವ ಅಧಿಕಾರ, ಪ್ರಶಸ್ತಿ ಬಯಸದೆ ಬದುಕಿ ನೈತಿಕತೆ ಒದಗಿಸಿ ಕೊಟ್ಟವರು. ನೀವು ಒಳ್ಳೆಯ ಲೇಖಕರಾಗಬೇಕಾದರೆ ನಗರದ ಬಣ್ಣದ ಬಣ್ಣನೆಗೆ ಕಿವಿಗೊಡಬೇಡಿ. ಗ್ರಾಮದ ಮಾತುಗಳಿಗೆ ಕಿವಿಯಾಗಿ ಎಂದು ಅವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ‘ಕೊರೊನೋತ್ತರ ಅವಧಿಯಲ್ಲಿ ಕುಳಿತು ಏಕಾಗ್ರತೆಯಿಂದ ಕೇಳುವ ಸಾವಧಾನತೆಯಿಲ್ಲ. ಪ್ರಚೋದನೆ ಕೊಡುವ ವಸ್ತುವಿನತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾದ ಕಾರಣ ಪ್ರೇರಣೆ ಹುಟ್ಟಿಸುವ ವಸ್ತುವಿನ ಕಡೆಗಿನ ಆಸಕ್ತಿ ಕಡಿಮೆಯಾಗಿದೆ. ವಿದ್ಯಾರ್ಥಿಗಳು ದೊರಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕಾಲೇಜಿನ ಉಪ ಪ್ರಾಂಶುಪಾಲರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ| ವಿಜಯಕುಮಾರ ಮೊಳೆಯಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಬಿನೋಯ್ ವಿನಯ್ ಡಿಸೋಜಾ ಸ್ವಾಗತಿಸಿ, ಅವನಿ ಮತ್ತು ಬಳಗದವರು ಪ್ರಾರ್ಥಿಸಿ, ಪ್ರತೀಕ್ಷಾ ಕೆ. ವಂದಿಸಿ, ಲಿಖಿತಾ ಪಿ. ಕಾರ್ಯಕ್ರಮವನ್ನು  ನಿರೂಪಿಸಿದರು.

You may also like

News

ಬಂಟ್ವಾಳದ ತೌಹೀದ್ ಶಾಲೆಗೆ ಕೀರ್ತಿ ತಂದ ಆಭಿದುನ್ನೀಸ – SSLC ಪರೀಕ್ಷೆಯಲ್ಲಿ ಭರ್ಜರಿ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಮಟ್ಟದ SSLC ಪರೀಕ್ಷಾ ಫಲಿತಾಂಶದಲ್ಲಿ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಭಿದುನ್ನೀಸ ಎಂ. ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ
News

ಪಾಲ್ದನೆ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ – ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನ ಶೈಕ್ಷಣಿಕ ಆಯೋಗದ ವತಿಯಿಂದ ಇತ್ತೀಚೆಗೆ

You cannot copy content of this page