ಅಪರಿಚಿತರಿಂದ ತಲವಾರು ಹಲ್ಲೆ – ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು
SP ಹಾಗೂ ಪಶ್ಚಿಮ ವಲಯ DIGP ಹಲ್ಲೆ ನಡೆದ ಸ್ಥಳಕ್ಕೆ ಭೇಟಿ

ಮೇ 16ರಂದು ಶುಕ್ರವಾರ ಸಾಯಂಕಾಲ ಸುಮಾರು 7.45 ಗಂಟೆಗೆ ಯಾಸಿರ್ ಅರಾಫತ್ ಅವರ ಕ್ಯಾಂಟೀನಿಗೆ ಬಂದ ದೂರದ ಸಂಬಂಧಿ, ಅಬ್ದುಲ್ ಹಮೀದ್ ತಂಪು ಪಾನೀಯ ಕುಡಿದು ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದರು. ಆಗ ಬೈಕಿನಲ್ಲಿ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಅವರುಗಳ ಪೈಕಿ ಓರ್ವ ತಾನು ತಂದಿದ್ದ ತಲವಾರಿನಿಂದ ಅಬ್ದುಲ್ ಹಮೀದ್ ರವರಿಗೆ ಹಲ್ಲೆ ನಡೆಸಿರುತ್ತಾನೆ. ತಲವಾರಿನಿಂದ ಕಡಿದ ಪರಿಣಾಮ ಎಡಕೈಗೆ ಗಂಬೀರ ಗಾಯವಾಗಿರುತ್ತದೆ. ಗಾಯಗೊಂಡ ಅಬ್ದುಲ್ ಹಮೀದ್ ರವರು ಬೊಬ್ಬೆ ಹಾಕಿ ಅಲ್ಲಿಂದ ದೂರ ಓಡಿದಾಗ ಆರೋಪಿಗಳು ಅದೇ ಬೈಕಿನಲ್ಲಿ ವಾಪಸ್ ಹೋಗಿರುತ್ತಾರೆ.

ಗಾಯಗೊಂಡ ಅಬ್ದುಲ್ ಹಮೀದ್ ರವರನ್ನು ಬಂಟ್ವಾಳದ ಸೋಮಯಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಪ್ರಕರಣದ ಪಿರ್ಯಾದುದಾರರಾದ ಯಾಸೀರ್ ಅರಾಫತ್, ಪ್ರಾಯ 23 ವರ್ಷ, ವಾಸ: ಜೈನರಪೇಟೆ ಮನೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಅ.ಕ್ರ : 53/2025 ಕಲಂ:118(1), 351(3), 109 ಜೊತೆಗೆ 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




