August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸುಳ್ಳು ಹೇಳುತ್ತಾ ತಾಲೂಕಿನ ಜನತೆಯನ್ನು ದಾರಿ ತಪ್ಪಿಸುತ್ತಿರುವ ಸುಳ್ಳಿನ ಸರದಾರ ರಕ್ಷಿತ್ ಶಿವರಾಂ – ಹರೀಶ್ ಪೂಂಜ 

ಪತ್ರಿಕಾಗೋಷ್ಟಿ ಮಾಡುತ್ತಾ ಪತ್ರಕರ್ತರಿಗೆ ಸುಳ್ಳು ದಾಖಲೆಗಳನ್ನು ನೀಡಿ ತಾಲೂಕಿನ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾ ಬದುಕಬೇಡಿ. ನಿಮ್ಮ ಸುಳ್ಳನ್ನು ಬೆಳ್ತಂಗಡಿಯ ಜನತೆ ಎಂದೂ ಒಪ್ಪಿಕೊಳ್ಳುವುದಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರಿಗೆ ತಿರುಗೇಟು ನೀಡಿದ್ದಾರೆ. ಅವರು ಜುಲಾಯ್ 16ರಂದು ಉಜಿರೆಯ ಓಶಿಯನ್ ಪರ್ಲ್  ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಕ್ಷಿತ್ ಶಿವರಾಂರವರಿಗೆ ರಾಜಕೀಯ ಪ್ರಭುದ್ಧತೆ ಇಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 3500 ಕೋಟಿ ರೂಪಾಯಿ ಅನುದಾನ ತಂದು ಕ್ರಿಯಾಯೋಜನೆ ಮಾಡಿದವ ನಾನು. ನಿಮ್ಮ ಈಗಿನ ರಾಜ್ಯ ಸರ್ಕಾರ ಕೊಟ್ಟಂತಹ 10 ಕೋಟಿಗೆ 10 ಸಾವಿರ ಕೋಟಿ ಕೊಟ್ಟಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದ.

ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ರವರಿಗೆ ಅಭಿವೃದ್ಧಿಯ ಅನುದಾನವಿದೆ. ಆದರೆ ಹರೀಶ್ ಪೂಂಜರಿಗೆ ಅನುದಾನ ಯಾಕಿಲ್ಲ ಎಂಬ ಪ್ರಶ್ನೆ ಕೇಳಿದ್ದೀರಿ. ಉಮಾನಾಥ್ ಕೋಟ್ಯಾನ್ ರವರು ಮಾಡಿದ ಅಭಿವೃದ್ಧಿಯಲ್ಲಿ ಒಂದೇ ಒಂದು ರಾಜ್ಯ ಸರ್ಕಾರದ ಅನುದಾನವಿಲ್ಲ. ಅವರು ಮಾಡಿದ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರದ ಅನುದಾನ ಇರುವಂತಹದ್ದು. ಅದು ಬಿಟ್ಟು ರಾಜ್ಯ ಸರ್ಕಾರದ ಅನುದಾನ ಎಂದು ಸುಳ್ಳಿನ ಸರಮಾಲೆಯನ್ನು ಕಟ್ಟುವುದಕ್ಕೆ ಹೋಗಬೇಡಿ. ಬೆಳ್ತಂಗಡಿ ತಾಲೂಕಿನಲ್ಲಿ ಯುವ ನಿಧಿ ಫಲಾನುಭವಿಗಳು ಎಷ್ಟು ಇದ್ದಾರೆ? ಕೇಂದ್ರ ಸರ್ಕಾರ ಕೊಡುವಂತಹ ಅನ್ನ ಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರದ್ದು ಎಂದು ಬಿಂಬಿಸಿದ್ದೀರಿ.

ಶಾಸಕ ಹರೀಶ್ ಪೂಂಜರು ಇದುವರೆಗೆ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ ಎಂಬ ಆರೋಪ ಮಾಡಿದ್ದೀರಿ, ಕೆಡಿಪಿ ಸಭೆ ಮಾಡಿದರೆ ಸಭೆಗೆ ಬಂದವರಿಗೆ ಚಾ – ಕಾಫಿ ಕೊಡುವುದಕ್ಕೂ ತಾಲೂಕು ಪಂಚಾಯತ್ ನಲ್ಲಿ ದುಡ್ಡಿಲ್ಲದ ಪರಿಸ್ಥಿತಿ ಬಂದಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅದ್ಭುತ ಜನಸ್ಪಂದನ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ. ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ರವರು ತಾಲೂಕಿಗೆ ತಂದ ಅನುದಾನವನ್ನು ನಾನು ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದೀರಿ ಯಾರೋ ಹುಟ್ಟಿಸಿದ ಮಗುವಿಗೆ ತಂದೆ ಆಗುವುದಕ್ಕೆ ಹೋಗಬೇಡಿ ಎಂದು ಟೀಕಿಸಿದರು.

ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆ : ಸಿ.ಆರ್.ಎಫ್.ನಿಂದ ಮಂಜೂರುಗೊಂಡ ರೂಪಾಯಿ 6 ಕೋಟಿ ಅನುದಾನದಲ್ಲಿ ಎಷ್ಟು ಕಾಮಗಾರಿ ಆಗುತ್ತದೆ? ಪಿಲಿಗೂಡು ತನಕ ಮಾತ್ರ ರಸ್ತೆ ದುರಸ್ಥಿಯಾಗಿದೆ. ಅದನ್ನು ನಾನು ಶಿಲಾನ್ಯಾಸ ಸಂದರ್ಭದಲ್ಲಿ ಹೇಳಿದ್ದೆ. ಈ ಕ್ಷೇತ್ರದ ಜನರನ್ನು ಸುಳ್ಳಿನ ಹಾದಿಯಲ್ಲಿ ದಾರಿ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸುತ್ತಾಡಿಸಿ ಯಾವುದೇ ಅನುದಾನವನ್ನು ತಾಲೂಕಿಗೆ ಕೊಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ.

ನನ್ನ ಮೇಲೆ 40% ಕಮಿಷನ್ ಪಡೆಯುವವ ಎಂದು ಆರೋಪ ಮಾಡಿದ್ದೀರಿ, ನಾನು ನನ್ನ ಕುಟುಂಬ ಭ್ರಷ್ಟಾಚಾರ ರಹಿತವಾಗಿದ್ದು, ನನ್ನ ಮೇಲೆ ವೃತಾ ಆರೋಪ ಮಾಡಿದ್ದೀರಿ. ಈಗ ನಿಮ್ಮದೇ ಸರ್ಕಾರ ಇದೆ ನಿಮಗೆ ತಾಕತ್ತು ಇದ್ದರೆ 40% ಕಮಿಷನ್ ನಾನು ಪಡೆದಿರುವ ಬಗ್ಗೆ ಲೋಕಾಯುಕ್ತ ಅಥವಾ ಸಿ.ಐ.ಡಿ. ಮತ್ತು ಎಸ್.ಐ.ಟಿ.ಯಿಂದ ತನಿಖೆ ಮಾಡಿಸಿ ನಾನು ನನ್ನ ಕುಟುಂಬ ಸಿದ್ದರಿದ್ದೇವೆ. ಮುಂದೆ 2028ರಲ್ಲಿ ತಾಲೂಕಿನ ಜನತೆಯ ಆಶೀರ್ವಾದದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಕುಟುಂಬ ಮಾಡಿದ ಎಲ್ಲಾ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುತ್ತೇನೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ., ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಕೆ.ಬಿ. ಮತ್ತು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಉಪಸ್ಥಿತರಿದ್ದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page