ಛತ್ತೀಸ್‌ಗಡ ಕ್ರೈಸ್ತ ಸನ್ಯಾಸಿನಿಯರ ಬಂಧನಕ್ಕೆ ಮಂಗಳೂರಿನಲ್ಲಿ ವ್ಯಾಪಕ ಆಕ್ರೋಶ
ಸತ್ಯದ ಪರವಾಗಿ ಒಗ್ಗಟ್ಟಿನಿಂದ ಹೋರಾಟ – ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ನೇತೃತ್ವ






ಸಿಸ್ಟರ್ ಪ್ರೀತಿ ಮೇರಿ, ಸಿಸ್ಟರ್ ವಂದನಾ ಫ್ರಾನ್ಸಿಸ್ ಹಾಗೂ ಸುಕಮಾನ್ ಮಾಂಡವಿ ಇವರೆಲ್ಲರ ಪರವಾಗಿ ನಿಂತು ಸತ್ಯ, ನ್ಯಾಯ ಮತ್ತು ಅಮಾಯಕರ ರಕ್ಷಣೆಯ ನಿಟ್ಟಿನಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಶಾಂತಿಯುತ ಪ್ರತಿಭಟನೆ ಇಂದು ಆಗಸ್ಟ್ 4ರಂದು ಸೋಮವಾರ ಸಂಜೆ 4:00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಎದುರುಗಡೆ ಆಯೋಜಿಸಿತ್ತು. “ಒಗ್ಗಟ್ಟಿನಿಂದ ಸತ್ಯದ ಪರವಾಗಿ” ಎಂಬ ಘೋಷಣೆಯೊಂದಿಗೆ ಮಂಗಳೂರು ಮಿನಿವಿಧಾನಸೌಧದ ಎದುರು ಆಯೋಜಿಸಲಾದ ಈ ಪ್ರತಿಭಟನೆ, ಕ್ರೈಸ್ತ ಸಮುದಾಯದ ವಿರುದ್ಧ ನಡೆಯುತ್ತಿರುವ ಆಧಾರರಹಿತ ಆರೋಪಗಳ ವಿರುದ್ಧ ಬಲವಾದ ಪ್ರತಿಸ್ಪಂದನವಾಗಿದೆ. “ನಿಸ್ವಾರ್ಥ ಸೇವೆ ಮಾಡುವವರಿಗೆ ನಮ್ಮ ಅಚಲ ಬೆಂಬಲವಿದೆ” ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಘೋಷಿಸಿದರು. ಪ್ರತಿಭಟನಾ ಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಜೆ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಛತ್ತೀಸ್‌ಗಡದಲ್ಲಿ ಎರಡು ಕಥೊಲಿಕ್ ಸನ್ಯಾಸಿನಿಯರ ಅನಧಿಕೃತ ಬಂಧನವನ್ನು ಖಂಡಿಸಿ, ಸಮಾಜದ ನಿರ್ದಿಷ್ಟ ವರ್ಗಗಳಿಗೆ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿರಾಕರಿಸಿರುವುದರಿಂದ ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಪಡಿಸಿದೆ ಎಂದು ಹೇಳಿದರು.





CRI ಅಧ್ಯಕ್ಷರಾದ ವಂದನೀಯ ಫಾದರ್ ಡೊಮಿನಿಕ್ ವಾಸ್ OCD ಇವರು ಮಾತನಾಡಿ, ಬಂಧಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 143 (ಮಾನವ ಸಾಗಣೆ) ಮತ್ತು ಛತ್ತೀಸ್‌ಗಡ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 1968 ರ ಸೆಕ್ಷನ್ 4 (ಅನಧಿಕೃತ ಧರ್ಮಾಂತರಣ) ಅಡಿಯಲ್ಲಿ ಆರೋಪ ಹೇರಲಾಗಿದೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂಬುದು ಸಾಬೀತಾಗಿದೆ. ಈ ಅನಾವಶ್ಯಕ ಮತ್ತು ಅನ್ಯಾಯಪೂರ್ಣ ಬಂಧನಗಳನ್ನು ನಾವು ಖಡಾಖಂಡಿತವಾಗಿ ಮತ್ತು ಸ್ಪಷ್ಟವಾಗಿ ಖಂಡಿಸುತ್ತೇವೆ,” ಎಂದರು. ಪ್ರಜಾಪ್ರಭುತ್ವ ಭಾರತದಲ್ಲಿ ಬಡವರು, ಅಲ್ಪಸಂಖ್ಯಾತರು ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು—ವಿಶೇಷವಾಗಿ ಆದಿವಾಸಿಗಳು ಮತ್ತು ದಲಿತರನ್ನು—ಲಕ್ಷ್ಯವಿಟ್ಟು ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ. ಮಾತಿನ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಅಣಕು ಮಾಡಲಾಗುತ್ತಿದೆ. ಬಹುಸಂಖ್ಯೆಯ ಭಾರತೀಯ ನಾಗರಿಕರು, ವಿಶೇಷವಾಗಿ ಬಿಹಾರದಲ್ಲಿ, ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಾವ್ಲ್ ರೋಲ್ಫಿ ಡಿಕೋಸ್ಟ ಆಕ್ರೋಶ ವ್ಯಕ್ತಪಡಿಸಿದರು.












ಕ್ರೈಸ್ತ ಸಮುದಾಯವು ದೇಶಾದ್ಯಂತ ಕೇವಲ 3% ಜನಸಂಖ್ಯೆಯನ್ನು ಹೊಂದಿದ್ದರೂ ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ನಮ್ಮ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಶೋಚನೀಯವಾಗಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಕ್ತಿಶಾಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇನ್ನೋರ್ವ ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ ಒತ್ತಾಯಿಸಿದ್ದಾರೆ. ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕಾಸ್ತೆಲಿನೊ ಮಾತನಾಡಿ “ಶಾಂತಿಯುತವಾಗಿ ಮತ್ತು ಸಂವಿಧಾನಾತ್ಮಕ ಮಾರ್ಗದಲ್ಲಿ ನ್ಯಾಯಕ್ಕಾಗಿ ಹೋರಾಡುವ ಈ ಚಳವಳಿ ಸಮಾಜದಲ್ಲಿ ಪರಿವರ್ತನೆಯ ಸಾಗರವನ್ನು ಹುಟ್ಟುಹಾಕಲಿ ಎಂಬುದು ಸಭೆಯ ಆಶಯವಾಗಿದೆ ಎಂದರು.
















ಜುಲಾಯಿ 25ರಂದು ಛತ್ತೀಸ್‌ಗಡದ ನಾರಾಯಣಪುರದಲ್ಲಿ ಸಿಸ್ಟರ್ ಪ್ರೀತಿ ಮೇರಿ, ಸಿಸ್ಟರ್ ವಂದನಾ ಫ್ರಾನ್ಸಿಸ್ ಹಾಗೂ ಇನ್ನೊಬ್ಬ ಮಹಿಳೆಯನ್ನು ರೈಲ್ವೆ ನಿಲ್ದಾಣದ ಬಳಿ ಬಂಧಿಸಿ, ಅವರ ಮೇಲೆ ಧಾರ್ಮಿಕ ಮತಾಂತರದ ಸುಳ್ಳು ಆರೋಪ ಹಾಕಲಾಗಿದೆ. ಮನೆ ಕೆಲಸಕ್ಕಾಗಿ ಅವರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಇದು ನಿಖರವಾದ ಮಾನವ ಹಕ್ಕುಗಳ ಉಲ್ಲಂಘನೆ ಎಂದು AICU ರಾಜ್ಯಾಧ್ಯಕ್ಷ ಹಾಗೂ ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಆಕ್ಷೇಪ ವ್ಯಕ್ತಪಡಿಸಿದರು.

ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಭೆ, ಬಂಧಿತ ಮಹಿಳೆಯರ ನಿಷ್ಪಕ್ಷಪಾತ ತನಿಖೆ ಆಗ್ರಹಿಸಿ, ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ನ್ಯಾಯಸಮ್ಮತ ಬೇಡಿಕೆಯನ್ನು ಒತ್ತಿಹೇಳಿತು. ಈ ಬೃಹತ್ ಪ್ರತಿಭಟನಾ ಸಭೆಯನ್ನು ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ.) ಇದರ ನೇತೃತ್ವದಲ್ಲಿ ನಡೆಸಲಾಗಿದ್ದು, ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಜೆ, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ, ಧರ್ಮಕ್ಷೇತ್ರದ PRO ರೋಯ್ ಕ್ಯಾಸ್ತೆಲಿನೊ, ಸಿಆರ್‌ಐ ಅಧ್ಯಕ್ಷ ಫಾದರ್ ಡೊಮಿನಿಕ್ ವಾಸ್ ಒಸಿಡಿ, ಸಿಸ್ಟರ್ ಸೆನ್ ಮಿನೇಜಸ್ ಎಸ್‌ಎಪಿ, ಆಲ್ವಿನ್ ಡಿಸೋಜ ಪಾನೀರ್, ಸ್ಪ್ಯಾನಿ ಲೋಬೊ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಕೇಂದ್ರೀಯ ಪ್ರಥಮ ಉಪಾಧ್ಯಕ್ಷ ಲೋರೆನ್ಸ್ ಡಿಸೋಜ ಸುರತ್ಕಲ್, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್ ಮೂಡಬಿದ್ರೆ, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಮಾಜಿ ಅಧ್ಯಕ್ಷರು, ವಲಯದ ಅಧ್ಯಕ್ಷರು, ಕಥೊಲಿಕ್ ಸಭಾ ಪ್ರಮುಖರು ಉಪಸ್ಥಿತರಿದ್ದರು.




