May 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೆಪ್ಟೆಂಬರ್ 11 ರಂದು ಗುರುವಾರ ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 11ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ.

ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಹಾಗೂ ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಎಲೋಶಿಯಸ್ ಪಾವ್ಲ್ ಡಿಸೋಜರವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಲಿದ್ದಾರೆ. ಅಂದು ಬೆಳಿಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದಾ ಮಣಿನಾಲ್ಕೂರುರವರಿಂದ ‘ಪ್ರೀತಿಯ ಸಿಂಚನ’ ಎಂಬ ‘ಸೌಹಾರ್ದ ಗಾಯನ’ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಹಿರಿಯ ಚೇತನ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕರಾದ ಹಾಗೂ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ವಿಜೇತರಾದ ಕರಿಯ ಕೆ. ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು.

ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತಿಗೆ ಮಹಾತಾಯಿ ಎಂದು ಗುರುತಿಸಿಕೊಂಡಿರುವ ಸಂತ ಮದರ್ ತೆರೇಸಾರವರ ವಿಚಾರ ಧಾರೆಯನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಜವಾಬ್ದಾರಿ ಸಮಾಜದ ಮೇಲಿದೆ. ಕಳೆದ 8 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಲ್ಲಿ ಸರ್ವಧರ್ಮದ ಸೌಹಾರ್ದಪ್ರಿಯ ಜನತೆ, ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಆದಿವಾಸಿ, ರೈತ, ಕಾರ್ಮಿಕ ಸಂಘಟನೆಗಳ ನಾಯಕರು, ಮಧ್ಯಮವರ್ಗದ ನೌಕರರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು, ವಕೀಲರು, ವೈದ್ಯರು, ಬುದ್ದಿಜೀವಿಗಳನ್ನೊಳಗೊಂಡ ಜಾತ್ಯಾತೀತ ನೆಲೆಗಟ್ಟಿನ ಮನಸ್ಸುಗಳು ಸೌಹಾರ್ದ ತಂಡವಾಗಿ ವಿವಿಧ ಹಂತದ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ. ಪ್ರತಿಯೊಂದು ಧರ್ಮದ ಹಬ್ಬಗಳು ಸರ್ವಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ಸೌಹಾರ್ದ ದೀಪಾವಳಿ, ಸೌಹಾರ್ದ ಕ್ರಿಸ್‍ಮಸ್, ಸೌಹಾರ್ಧ ಇಫ್ತಾರ್ ಕೂಟ ಹಾಗೂ ನಾಡಹಬ್ಬ ದಸರಾವನ್ನು ಸಾಮರಸ್ಯ ದಸರವನ್ನಾಗಿ ಆಚರಿಸಲಾಗುತ್ತಿದೆ. ಮದರ್ ತೆರೇಸಾರವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ‘ಚಿಣ್ಣರ ಕಲರವ’ ಎಂಬ ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಕೂಡ ನಡೆಸಲಾಗಿದೆ. ಸೌಹಾರ್ದತೆ ಹಾಗೂ ಜನತೆಯ ಬದುಕಿನ ಪ್ರಶ್ನೆಗಳು ಎದುರಾದಾಗ ಇತರ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡು ಶಕ್ತಿಮೀರಿ ಶ್ರಮಿಸಲಾಗಿದೆ.ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11ರಂದು ಗುರುವಾರ ನಗರದ ಪುರಭವನದಲ್ಲಿ ನಡೆಯುವ ಅತ್ಯಂತ ಮಹತ್ವದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನತೆ, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದ್ದಾರೆ.

ಇಂದು ಸೆಪ್ಟೆಂಬರ್ 9ರಂದು ಮಂಗಳವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಸುನಿಲ್‍ ಕುಮಾರ್ ಬಜಾಲ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಮಂಜುಳಾ ನಾಯಕ್ – ಅಧ್ಯಕ್ಷರು, ಸಾಮರಸ್ಯ, ಮಂಗಳೂರು, ರಾಕೇಶ್ ಕುಂದರ್ – ದಲಿತ ಚಳುವಳಿಯ ಯುವ ನಾಯಕರು, ರೆಹಮಾನ್‍ಖಾನ್ ಕುಂಜತ್ತಬೈಲ್ – ಸಾಮಾಜಿಕ ಚಿಂತಕರು, ಸುಮತಿ ಎಸ್. ಹೆಗ್ಡೆ – ಜಿಲ್ಲಾ ಮಹಿಳಾ ಮುಖಂಡರು, ಡೋಲ್ಫಿ ಡಿಸೋಜ ಮತ್ತು ಜ್ಯೋತಿಯವರು ಉಪಸ್ಥಿತರಿದ್ದರು.

You may also like

News

A New Vision of Care: Blessing and Commissioning of Advanced Radiography System at FMMCH

Father Muller Medical College Hospital marked a significant milestone in its commitment to patient-centered care with the blessing and commissioning
News

ದ್ವಿತೀಯ ಪಿಯುಸಿ ಫಲಿತಾಂಶ – ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿಗೆ ಶೇ. 98.05 ಯಶಸ್ಸು

ರಾಜ್ಯ ಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಪ್ರಾಂಶುಪಾಲರಾದ ಭಗಿನಿ ನೊರಿನ್ ಡಿಸೋಜ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರು ನಗರದ ಪ್ರತಿಷ್ಠಿತ ಸೈಂಟ್

You cannot copy content of this page