ಕ್ರೈಸ್ತರ ಸಮೀಕ್ಷೆ ಪಟ್ಟಿಯಲ್ಲಿ ‘ಕಥೊಲಿಕ’ ಪದ ಸೇರಿಸಲು ಅಖಿಲ ಭಾರತ ಕ್ರೈಸ್ತ ಒಕ್ಕೂಟ ಒತ್ತಾಯ
ಸಮೀಕ್ಷೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಬರಲು ‘ಕಥೊಲಿಕ’ ಪದವನ್ನು ಸೇರಿಸುವುದು ಅಗತ್ಯ – AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಅಖಿಲ ಭಾರತ ಕ್ರೈಸ್ತ ಒಕ್ಕೂಟ (ರಿ.), ಕರ್ನಾಟಕ ರಾಜ್ಯ ಘಟಕವು ಕ್ರೈಸ್ತರ ಸಮೀಕ್ಷೆ ಪಟ್ಟಿಯಲ್ಲಿ ಕಥೊಲಿಕರ ಸೇರ್ಪಡೆ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ. ಕ್ರೈಸ್ತ ಸಮುದಾಯದ ಜಾತಿ ಪಟ್ಟಿಯಲ್ಲಿ ಹಲವು ಗೊಂದಲಗಳಿರುವುದಾಗಿ ಹೇಳಿರುವ ಯೂನಿಯನ್, ದೊಡ್ಡ ಸಂಖ್ಯೆಯಲ್ಲಿ ಇರುವ ‘ಕಥೊಲಿಕ’ ಸಮುದಾಯದ ಹೆಸರು ಪಟ್ಟಿಯಲ್ಲಿ ಉಲ್ಲೇಖವಾಗದೆ ಇರುವುದರಿಂದ ಕ್ರೈಸ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದೆ.

AICU ರಾಜ್ಯಾಧ್ಯಕ್ಷ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರು ಸಲ್ಲಿಸಿದ ಮನವಿಯಲ್ಲಿ, ಕ್ರೈಸ್ತರ 52 ಜಾತಿ ಪಟ್ಟಿಯಲ್ಲಿ ‘ಕಥೊಲಿಕ’ ಎಂಬ ಪದವನ್ನು ಸೇರಿಸುವಂತೆ ವಿನಂತಿಸಲಾಗಿದೆ. ಅಲ್ಲದೆ ಸಮೀಕ್ಷೆ ನಮೂನೆಯಲ್ಲಿ ಕ್ರಮ ಸಂಖ್ಯೆ 9 ನಂತರ ‘ಕಥೋಲಿಕ’ ಎಂಬ ಪದವನ್ನು ಸೇರಿಸಿ, ನಂತರದ ಕ್ರಮ ಸಂಖ್ಯೆಯನ್ನು ಮುಂದುವರಿಸಲು ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
“ನಮ್ಮಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೂ ಸಮೀಕ್ಷೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಬರಲು ‘ಕಥೊಲಿಕ’ ಪದವನ್ನು ಸೇರಿಸುವುದು ಅಗತ್ಯ”ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟ ಮನವಿಯಲ್ಲಿ ಉಲ್ಲೇಖಿಸಿದೆ.




