August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಂಚಾಯಿತಿ ಅವ್ಯವಹಾರ ಬಯಲು ಮಾಡಲು ಹಾಲು ಕೊಡುವ ಹಸು ಮಾರಾಟ ಮಾಡಿ RTI ದಾಖಲೆ ಪಡೆದ ರೈತ ರವಿಯ ಧೈರ್ಯ ರಾಜ್ಯಾದ್ಯಂತ ಚರ್ಚೆ

16,000 ಪುಟಗಳ ದಾಖಲೆಗಾಗಿ ₹32,000 ಪಾವತಿಸಿದ ರವಿ – ಎತ್ತಿನಗಾಡಿಯಲ್ಲಿ ಮನೆಗೆ ಸಾಗಿಸಿದ ದಾಖಲೆಗಳ ಬೃಹತ್ ಬಂಡಲ್

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದ ರೈತ ಬಿ.ಎಸ್. ರವಿಯವರು ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲು ಮಾಡಲು ಕೈಗೊಂಡಿರುವ ಸಾಹಸ ಎಲ್ಲರನ್ನು ಆಶ್ಚರ್ಯಗೊಳಿಸಿದೆ. ಮಾಹಿತಿ ಹಕ್ಕು ಕಾಯ್ದೆ (RTI) ಯಡಿ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ PDO ರವರು ಒಟ್ಟು 16,000 ಪುಟಗಳ ದಾಖಲೆಗಳು ಲಭ್ಯವಿವೆ ಎಂದು ತಿಳಿಸಿದ್ದಾರೆ. ಕಾಯ್ದೆಯ ಪ್ರಕಾರ ಪ್ರತಿ ಪುಟಕ್ಕೆ ರೂಪಾಯಿ 2ರಂತೆ, ರವಿಗೆ 32,000 ರೂಪಾಯಿಗಳನ್ನು ಪಾವತಿಸಬೇಕಾಯಿತು.

ಇಷ್ಟು ದೊಡ್ಡ ಮೊತ್ತವನ್ನು ಒದಗಿಸಲು ಸಾಧ್ಯವಾಗದಿದ್ದರೂ ಹೋರಾಟದಿಂದ ಹಿಂದೆ ಸರಿಯದ ರವಿ, ತಾವು ಸಾಕಿದ ಹಾಲು ಕೊಡುತ್ತಿದ್ದ ಹಸುವನ್ನೇ ರೂಪಾಯಿ 32,000ಕ್ಕೆ ಮಾರಾಟ ಮಾಡಿ ಅಗತ್ಯ ಹಣವನ್ನು ಸಂಗ್ರಹಿಸಿದರು. ಗ್ರಾಮ ಪಂಚಾಯತ್ ನಿಂದ ಸಾವಿರಾರು ಪುಟಗಳ ದಾಖಲೆಗಳ ಬೃಹತ್ ಬಂಡಲ್ ಪಡೆದ ನಂತರ ಅವನ್ನು ಮನೆಗೆ ಸಾಗಿಸಲು ಅವರು ಎತ್ತಿನಗಾಡಿಯನ್ನು ಬಳಸಿದ ಘಟನೆ ಗ್ರಾಮದಲ್ಲಿ ಕುತೂಹಲ ಮೂಡಿಸಿತು.

ದಾಖಲೆ ನೀಡುವ ಸಂದರ್ಭದಲ್ಲಿ ಕೆಲವರು ಪೊಲೀಸ್ ದೂರು ನೀಡಿ ರವಿಯನ್ನು ತಡೆಯಲು ಪ್ರಯತ್ನಿಸಿದ ವಿಚಾರವೂ ಬೆಳಕಿಗೆ ಬಂದಿದೆ. ಆದರೆ ಯಾವುದೇ ಒತ್ತಡಕ್ಕೆ ತಲೆಬಾಗದೆ ಹಸು ಮಾರಾಟದ ಹಣದಿಂದಲೇ ದಾಖಲೆ ಪಡೆದು, ಪಂಚಾಯತ್ ನಲ್ಲಿ ನಡೆಯುವ ಅವ್ಯವಹಾರಗಳನ್ನು ಸಾರ್ವಜನಿಕರಿಗೆ ತೋರಿಸಲು ರವಿ ಸಿದ್ಧರಿದ್ದಾರೆ.

ಹಾಲು ಕೊಡುತ್ತಿದ್ದ ಹಸುವನ್ನು ಮಾರಾಟ ಮಾಡಿ RTI ದಾಖಲೆ ಸಂಗ್ರಹಿಸಿದ ರವಿಯವರ ಈ ಧೈರ್ಯ ಮತ್ತು ನಿಸ್ವಾರ್ಥ ಹೋರಾಟ ಈಗ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಚರ್ಚೆಯ ವಿಷಯವಾಗಿದೆ.

You may also like

News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.
News

“ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ – ಸಮಿತಿ ರಚನೆಗೆ ಸಿಜೆ ಭರವಸೆ”

ಬೆಂಗಳೂರು: ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು

You cannot copy content of this page