October 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮುಲ್ಕಿಯ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಯೆಟಿಕಾ ಕವಿಗೋಷ್ಠಿ–45

ಶಾಲೆಯ ಎಲ್ಲಾ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಆಟಿಕೆಗಳ ವಿತರಣೆ

ನವೆಂಬರ್ 25ರಂದು ಮಂಗಳವಾರ ಮುಲ್ಕಿಯ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪೊಯೆಟಿಕಾ ಕವಿಗೋಷ್ಠಿ – 45’ ಹಾಗೂ ಶಾಲೆಯ ಎಲ್ಲಾ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಆಟಿಕೆಗಳ ವಿತರಣಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಬ್ಯಾಂಡ್ ವಾದ್ಯದ ನುಡಿಗಟ್ಟಿನಲ್ಲಿ ಅತಿಥಿಗಳನ್ನು ಬರಮಾಡಿಕೊಳ್ಳಲಾಗಿದ್ದು, ನಂತರ ಶಾಲಾ ಮಕ್ಕಳಿಂದ ಪ್ರಾರ್ಥನಾ ಗೀತೆ ಮತ್ತು ಸ್ವಾಗತ ನೃತ್ಯಗಳ ಮೂಲಕ ಆತ್ಮೀಯ ಸ್ವಾಗತ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯ ಸಲಹೆದಾರರಾದ ವಂದನೀಯ ಭಗಿನಿ ಶಾಲೆಟ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ವಧರ್ಮ ಸಂಗಮದ ಮ್ಯಾನೇಜಿಂಗ್ ಟ್ರಸ್ಟಿ ಹೇಮಾಚಾರ್ಯ, ಕಾರ್ಯಕ್ರಮದ ಸಂಘಟಕ ನವೀನ್ ಪಿರೇರಾ (ಸುರತ್ಕಲ್), ಕವಿಗೋಷ್ಠಿಯ ಅಧ್ಯಕ್ಷ ಮನ್ಸೂರ್ ಮುಲ್ಕಿ, ಮೆಡಲಿನ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಭಗಿನಿ ಜೆಸಿಂತಾ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಸುಮಾ ಹಾಗೂ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಭಗಿನಿ ಪ್ರೆಸಿಲ್ಲಾ ಫ್ಲೋರಿ ಡಿಸೋಜ ಉಪಸ್ಥಿತರಿದ್ದರು.

ಅತಿಥಿಗಳನ್ನು ಭಗಿನಿ ಪ್ರೆಸಿಲ್ಲಾ ಫ್ಲೋರಿ ಡಿಸೋಜ ಆತ್ಮೀಯವಾಗಿ ಸ್ವಾಗತಿಸಿದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ರುವಾರಿ ಹಾಗೂ ಪೊಯೆಟಿಕಾ ಸಂಸ್ಥೆಯ ಮುಖ್ಯಸ್ಥ ನವೀನ್ ಪಿರೇರಾ ಸುರತ್ಕಲ್ ರವರಿಗೆ ಶಾಲಾ ವತಿಯಿಂದ ಸನ್ಮಾನ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾದ ದಾಯ್ಜಿವರ್ಲ್ಡ್ ನಿರ್ದೇಶಕ ಹೇಮಾಚಾರ್ಯ ಹಾಗೂ ಅಧ್ಯಕ್ಷೆ ಭಗಿನಿ ಶಾಲೆಟ್ ಡಿಸೋಜ, ಪೊಯೆಟಿಕಾ ಸಂಸ್ಥೆಯ ಸಾಹಿತ್ಯ ಸೇವೆ ಹಾಗೂ ಜನಪರ ಕಾಳಜಿಯನ್ನು ಪ್ರಶಂಸಿಸಿದರು.

ಮೆಡಲಿನ್ ಹಳೆಯವಿದ್ಯಾರ್ಥಿ ಮತ್ತು ಪೊಲೀಸ್ ಅಧಿಕಾರಿಯಾದ ಮನ್ಸೂರ್ ಮುಲ್ಕಿಯ ನೇತೃತ್ವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜೊಸ್ಸಿ ಪಿಂಟೊ, ಹೇಮಾಚಾರ್ಯ, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಮರಿಯ ಜಾರ್ಜ್ ಕುಲ್ಶೇಖರ್ ಹಾಗೂ ನವೀನ್ ಪಿರೇರಾ ಸುರತ್ಕಲ್ ತಮ್ಮ ತಮ್ಮ ಕವಿತಾ ವಾಚನಗಳನ್ನು ನೆರವೇರಿಸಿದರು.

ಕವಿಗೋಷ್ಠಿಯ ಬಳಿಕ ಎಡ್ವರ್ಡ್ ಲೋಬೊ ಅವರ ಮಿಮಿಕ್ರಿ ಪ್ರದರ್ಶನ ಮಕ್ಕಳನ್ನು ಮನೋರಂಜಿಸಿ ಮಂತ್ರಮುಗ್ಧರನ್ನಾಗಿ ಮಾಡಿತು. ನಂತರ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಆಟಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಸಹಶಿಕ್ಷಕಿ ಕೊನಿ ಪಿ. ವಾಜ್ ನಿರೂಪಿಸಿದ್ದು, ಸಹಶಿಕ್ಷಕಿ ಲವೀನಾ ಜಾಯ್ಸ್ ರೊಡ್ರಿಗಸ್ ಧನ್ಯವಾದಗಳನ್ನು ಸಲ್ಲಿಸಿದರು.

ಆಟಿಕೆಗಳನ್ನು ಪಡೆದ ಮಕ್ಕಳ ಮುಖದಲ್ಲಿ ಅರಳಿದ ಸಂತಸದ ನಗುವು ಮತ್ತು ಶಾಲೆಯ ವಾತಾವರಣದಲ್ಲಿ ಮೂಡಿದ ಆನಂದದ ಹೊನಲೊಂದು, ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಮನಸೆಳೆಯುವಂತಿತ್ತು.

You may also like

News

ಮೂಡುಬಿದಿರೆಯಲ್ಲಿ ವಿದ್ಯುತ್ ಅವಘಡ: ಮಗ ಶೋನ್‌ನ ರಕ್ಷಣೆಗೆ ಧಾವಿಸಿದ ತಾಯಿ ಮರ್ಸಿ ಮಸ್ಕರೇನಸ್‌ಗೂ ವಿದ್ಯುತ್ ಶಾಕ್‌ – ಇಬ್ಬರೂ ದುರ್ಮರಣ!

ಮಗನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಪ್ರವಹಿಸಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ 45 ವರ್ಷ ಪ್ರಾಯದ
News

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ವೈಭವ ಸಂಪನ್ನ – ಒಂಬತ್ತು ದಿನಗಳ ವಿಶೇಷ ಪೂಜೆ, ಧಾರ್ಮಿಕ ಉತ್ಸವ ಹಾಗೂ ಸಂಗೀತಾರಾಧನೆಗೆ ತೆರೆ

ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂಬತ್ತು ದಿನಗಳ ಕಾಲ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನಡೆದ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 19ರಂದು ಮಹಾನವಮಿಯಂದು

You cannot copy content of this page