May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಯೇಸು ಕ್ರಿಸ್ತರ ನಿಂದನೆಗೆ ಮೌನವಿಲ್ಲ: ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರಜಾಸತ್ತಾತ್ಮಕ ಪ್ರತಿಭಟನೆ – ಸಂತೋಷ್ ಡಿಸೋಜ ಬಜ್ಪೆ ಎಚ್ಚರಿಕೆ”

ಧಾರ್ಮಿಕ ದ್ವೇಷ ಭಾಷೆಗೆ ಅಂತ್ಯ ಬೇಕು – ಪ್ರಮೋದ್ ಮುತಾಲಿಕ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಧರ್ಮದ ಪಾದ್ರಿಗಳು, ಪಾಸ್ಟರ್‌ಗಳು, ಸನ್ಯಾಸಿನಿಯರು ಹಾಗೂ ಕರ್ತನಾದ ಯೇಸು ಕ್ರಿಸ್ತರ ವಿರುದ್ಧ ಬಳಸಿರುವ ಅವಮಾನಕಾರಿ ಮತ್ತು ನಿಂದನಾತ್ಮಕ ಭಾಷೆಯನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಅತ್ಯಂತ ತೀವ್ರವಾಗಿ ಖಂಡಿಸುತ್ತದೆ.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜ್ಪೆ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಇದು ಕೇವಲ ಒಂದು ಧಾರ್ಮಿಕ ಸಮುದಾಯದ ಅವಮಾನವಲ್ಲ; ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಧಾರ್ಮಿಕ ಸ್ವಾತಂತ್ರ್ಯ, ಸಹಬಾಳ್ವೆ ಮತ್ತು ಸೌಹಾರ್ದತೆಯ ಮೇಲಿನ ನೇರ ದಾಳಿ ಎಂದು ಹೇಳಿದ್ದಾರೆ. ಇಂತಹ ದ್ವೇಷಪೂರಿತ ಭಾಷಣಗಳು ಸಮಾಜದಲ್ಲಿ ಅಶಾಂತಿ, ವೈಷಮ್ಯ ಮತ್ತು ಹಿಂಸೆಗೆ ದಾರಿ ಮಾಡಿಕೊಡುವ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಅವರು ಎಚ್ಚರಿಸಿದರು.

ಹಿಂದೆ ಶಾಲೆಗಳ ಕ್ರಿಸ್‌ಮಸ್ ರಜೆ ವಿಚಾರದಲ್ಲಿ ಮುತಾಲಿಕ್ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಕುರಿತು ಸಹನಶೀಲತೆ ತೋರಿಸಿ ಪ್ರತಿಕ್ರಿಯೆ ನೀಡದೇ ಮೌನ ವಹಿಸಲಾಗಿತ್ತು. ಆದರೆ ಈ ಬಾರಿ ಕ್ರೈಸ್ತ ಧರ್ಮಗುರುಗಳು ಹಾಗೂ ಯೇಸು ಕ್ರಿಸ್ತರನ್ನು ನೇರವಾಗಿ ಅವಮಾನಿಸುವ ಮೂಲಕ ಅವರು ಎಲ್ಲ ಮಿತಿಗಳನ್ನು ಮೀರಿ ಹೋಗಿದ್ದಾರೆ ಎಂದು ಸಂತೋಷ್ ಡಿಸೋಜ ಬಜ್ಪೆ ಕಿಡಿಕಾರಿದರು. ಈ ಕುರಿತು ಡಿಸೆಂಬರ್ 14ರಂದು ಭಾನುವಾರ ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ರಾಜ್ಯ ಸರ್ಕಾರವು ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಆಗ್ರಹಿಸಿದೆ.

ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಗಂಭೀರ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ, ಕ್ರೈಸ್ತ ಸಮುದಾಯವು ಸಂವಿಧಾನಬದ್ಧ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲು ಬಾಧ್ಯವಾಗುತ್ತದೆ ಎಂಬುದಾಗಿ ಸಂಘಟನೆ ಸ್ಪಷ್ಟ ಎಚ್ಚರಿಕೆ ನೀಡಿದೆ.

“ನಮ್ಮದು ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ನಂಬುವ ಸಮುದಾಯ. ಆದರೆ ನಮ್ಮ ಧರ್ಮ, ನಂಬಿಕೆ ಮತ್ತು ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದಾಗ ಮೌನವಾಗಿರುವ ಪ್ರಶ್ನೆಯೇ ಇಲ್ಲ” ಎಂದು ಸಂತೋಷ್ ಡಿಸೋಜ ಬಜ್ಪೆ ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಹಾಗೂ ಸೌಹಾರ್ದ ಸಮಿತಿ ಸಂಚಾಲಕ ಅರುಣ್ ಡಿಸೋಜ ನೇಜಿಗುರಿ ಉಪಸ್ಥಿತರಿದ್ದರು.

You may also like

News

ಉಡುಪಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವಾರ್ಷಿಕ ಸಭೆ – ಸಂಘಟನೆ ಬಲವರ್ಧನೆಗೆ ಪಣ

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವಾರ್ಷಿಕ ಮಹಾಸಭೆಯು ಮೇ 1ರಂದು ಶುಕ್ರವಾರ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಯುವ ಶಕ್ತಿಯನ್ನು ರಾಜಕೀಯವಾಗಿ
News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a

You cannot copy content of this page