July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೆಂಗಳೂರಲ್ಲಿ ಬೆಳಂಬೆಳಗ್ಗೆ ಜೆಸಿಬಿ ಆರ್ಭಟ – 200ಕ್ಕೂ ಹೆಚ್ಚು ಮನೆಗಳು ನೆಲಸಮ

ಆಡಳಿತ ಕಣ್ಣುಮುಚ್ಚಿದ್ದರ ಪರಿಣಾಮ ನಿರ್ಮಾಣಗೊಂಡ ಅಕ್ರಮ ಕಾಮಗಾರಿ

ವರ್ಷಗಳ ಕಾಲ ಕಣ್ಣುಮುಚ್ಚಿಕೊಂಡಿದ್ದ ಆಡಳಿತ ಯಂತ್ರ ಇದೀಗ ಅಚಾನಕ್ ಎಚ್ಚೆತ್ತುಕೊಂಡಂತಾಗಿದೆ. ಸಿಲಿಕಾನ್ ಸಿಟಿಯ ಹೊರವಲಯದ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಗೋಮಾಳ ಭೂಮಿಯ ಮೇಲೆ ಅಕ್ರಮವಾಗಿ ನಿರ್ಮಿಸಿದ್ದ ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಇಂದು ಡಿಸೆಂಬರ್ 20ರಂದು ಶನಿವಾರ ಬೆಳಂಬೆಳಗ್ಗೆ ಜೆಸಿಬಿಗಳ ಮೂಲಕ ನೆಲಸಮಗೊಳಿಸಲಾಗಿದೆ. ಆದರೆ ಈ ಅಕ್ರಮಗಳಿಗೆ ಇಷ್ಟು ದಿನ ಅವಕಾಶ ನೀಡಿದವರು ಯಾರು ಎಂಬ ಪ್ರಶ್ನೆ ಇದೀಗ ಜನಮನದಲ್ಲಿ ಕಾಡುತ್ತಿದೆ.

ಶ್ರೀನಿವಾಸಪುರದ ಕೋಗಿಲು ಲೇಔಟ್‌ನ ಗೋಮಾಳ ಭೂಮಿಯನ್ನು ನಗರ ಪಾಲಿಕೆಗೆ ಹಸ್ತಾಂತರಿಸಲಾಗಿದ್ದರೂ, ಯಾವುದೇ ಅನುಮತಿ ಇಲ್ಲದೆ ಮನೆಗಳು ತಲೆಎತ್ತಿದ್ದು ಆಡಳಿತದ ಭಾರೀ ವೈಫಲ್ಯವನ್ನೇ ತೋರಿಸುತ್ತದೆ. ವರ್ಷಗಳ ಕಾಲ ವಿದ್ಯುತ್, ನೀರು, ರಸ್ತೆ ಸೌಲಭ್ಯ ಪಡೆದು ಮನೆಗಳು ನಿಂತಿದ್ದರೂ, ಈಗ ಏಕಾಏಕಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಇಳಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನ್ಯಾಯಾಲಯದ ನಿರ್ದೇಶನ ಹಾಗೂ ಪೂರ್ವ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರೂ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬದುಕು ಇದೀಗ ಜೆಸಿಬಿಗಳ ಮುಂದೆ ಧೂಳಾಗಿ ಪರಿಣಮಿಸಿದೆ. ತೆರವು ಕಾರ್ಯಾಚರಣೆಗೆ ಆರು ಜೆಸಿಬಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಪ್ರತಿರೋಧ ಉಂಟಾಗದಂತೆ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಬೆಳಗ್ಗಿನಿಂದಲೇ ಜೆಸಿಬಿಗಳ ಗರ್ಜನೆ, ಮನೆಗಳ ಕುಸಿತ, ಮಹಿಳೆಯರು ಮತ್ತು ಮಕ್ಕಳ ಅಳಲು—ಕೋಗಿಲು ಲೇಔಟ್ ಇಂದು ಕಣ್ಣೀರಿನ ಕಣಿವೆಯಾಗಿ ಮಾರ್ಪಟ್ಟಿದೆ. ಕೆಲ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರೂ, ಭದ್ರತಾ ಪಡೆಗಳ ಬಲದ ಮುಂದೆ ಅವರ ಧ್ವನಿ ಮಗ್ಗುಚ್ಛಿದೆ.

ಸರ್ಕಾರಿ ಜಾಗವನ್ನು ರಕ್ಷಿಸುವುದು ಅಗತ್ಯವೇ ಆದರೆ, ಅಕ್ರಮ ನಿರ್ಮಾಣಕ್ಕೆ ವರ್ಷಗಳ ಕಾಲ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಏನು ಕ್ರಮ? ಒತ್ತುವರಿ ಮಾಡುವವರಷ್ಟೇ ಅಲ್ಲ, ಮೌನವಾಗಿ ಬೆಂಬಲಿಸಿದ ಅಧಿಕಾರಿಗಳ ಮೇಲೂ ಕ್ರಮ ಜರುಗಿಸುವುದೇ ಎಂಬ ಪ್ರಶ್ನೆಗಳಿಗೆ ಜಿಲ್ಲಾಡಳಿತ ಇನ್ನೂ ಉತ್ತರಿಸಿಲ್ಲ. ಜೆಸಿಬಿ ಮಾತ್ರ ಓಡುತ್ತಿದೆ, ಆದರೆ ಹೊಣೆಗಾರಿಕೆ ಯಾರ ಮೇಲಿದೆ ಎಂಬುದು ಇನ್ನೂ ಮಸುಕಲ್ಲೇ ಉಳಿದಿದೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page