July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ 54 ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರ ನಿರ್ಮಾಣ

ಐಸಿವೈಎಂ ಪುತ್ತೂರು ಘಟಕದ ಐತಿಹಾಸಿಕ ಸಾಧನೆ

ICYM ಪುತ್ತೂರು ಘಟಕವು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್ ಆವರಣದಲ್ಲಿ 54 ಅಡಿ ಎತ್ತರದ ಭವ್ಯ ಕ್ರಿಸ್‌ಮಸ್ ನಕ್ಷತ್ರವನ್ನು ನಿರ್ಮಿಸಿ ಗಮನ ಸೆಳೆದಿದೆ. “ಸ್ಟಾರ್ ಆಫ್ ಪುತ್ತೂರು” ಎಂದು ಕರೆಯಲ್ಪಡುವ ಈ ನಕ್ಷತ್ರವು ಕೇವಲ ಹಬ್ಬದ ಅಲಂಕಾರವಲ್ಲ; ಭರವಸೆ, ಏಕತೆ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುವ ದೀಪ್ತಿಮಯ ಸಂಕೇತವಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಐಸಿವೈಎಂ ಪುತ್ತೂರು ಘಟಕದ ಸದಸ್ಯರು ವಾರಗಳ ಕಾಲ ನಿರಂತರವಾಗಿ ಶ್ರಮಪಟ್ಟಿದ್ದಾರೆ. ಪ್ರಾರಂಭಿಕ ಕಲ್ಪನೆಯಿಂದ ಹಿಡಿದು ವಿನ್ಯಾಸ ರೂಪಿಸುವುದು, ಉಕ್ಕಿನ ಬೃಹತ್ ಅಡಿಪಾಯವನ್ನು ವೆಲ್ಡಿಂಗ್ ಮೂಲಕ ನಿರ್ಮಿಸುವುದು, ಬಟ್ಟೆ ಅಳವಡಿಕೆ, ಸಾವಿರಕ್ಕೂ ಹೆಚ್ಚು ಎಲ್‌ಇಡಿ ದೀಪಗಳ ತಂತಿ ಜೋಡಣೆ ಮತ್ತು ವಿದ್ಯುತ್ ವ್ಯವಸ್ಥೆ – ಪ್ರತಿಯೊಂದು ಹಂತದಲ್ಲೂ ಯುವಕರೇ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಹಗಲು-ರಾತ್ರಿ ದುಡಿದು ತಮ್ಮ ಶಕ್ತಿ, ಸಮಯ ಮತ್ತು ಪ್ರತಿಭೆಯನ್ನು ಸಂಪೂರ್ಣವಾಗಿ ಸಮರ್ಪಿಸಿದ್ದಾರೆ. “ಇಂದಿನ ಸಮಾಜದಲ್ಲಿ ವಿಭಜನೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ, ಜನರನ್ನು ಒಂದೆಡೆಗೂಡಿಸುವ ಬೆಳಕನ್ನು ಸೃಷ್ಟಿಸುವುದೇ ನಮ್ಮ ಉದ್ದೇಶವಾಗಿತ್ತು. ಈ ನಕ್ಷತ್ರವು ಶಾಂತಿ, ಸಹಬಾಳ್ವೆ ಮತ್ತು ಕ್ರಿಸ್ತನ ಬೆಳಕಿನ ದಾರಿದೀಪವಾಗಿದೆ” ಎಂದು ಐಸಿವೈಎಂ ಪುತ್ತೂರು ಘಟಕದ ಅಧ್ಯಕ್ಷ ಸುಶಾಂತ್ ವೇಗಸ್ ಅವರು ತಿಳಿಸಿದರು.

ಈ ಯೋಜನೆಗೆ ಮಾಯ್ ದೆ ದೆವುಸ್ ಚರ್ಚ್ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂದನೀಯ ಫಾದರ್ ಮರ್ವಿನ್ ಪ್ರವೀಣ್ ಲೋಬೊ ಹಾಗೂ ಐಸಿವೈಯಂ ಸಚೇತಕ ರೋಹನ್ ಡಯಾಸ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಹತ್ತರ ಬೆಂಬಲವಾಯಿತು. ಅವರ ಸಲಹೆ ಮತ್ತು ಆಶೀರ್ವಾದದಿಂದ ಯುವಕರು ಹೆಚ್ಚಿನ ಉತ್ಸಾಹದಿಂದ ಕಾರ್ಯನಿರ್ವಹಿಸಿದರು.

ಕ್ರಿಸ್‌ಮಸ್ ಹಬ್ಬದ ಅವಧಿಯಲ್ಲಿ ಪ್ರತಿದಿನ ಸಂಜೆ ಈ ನಕ್ಷತ್ರವನ್ನು ಬೆಳಗಿಸಲಾಗುತ್ತಿದ್ದು, ಚರ್ಚ್ ಆವರಣವು, ಭಕ್ತರು ಹಾಗೂ ಸಾರ್ವಜನಿಕರಿಂದ ಕಂಗೊಳಿಸುತ್ತಿದೆ. ಈ ಅಪೂರ್ವ ನಕ್ಷತ್ರವನ್ನು ವೀಕ್ಷಿಸಲು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಐಸಿವೈಎಂ ಪುತ್ತೂರು ಘಟಕ ಆಹ್ವಾನಿಸಿದೆ.

ಈ ಯೋಜನೆ ದಾಖಲೆಯ ಸಾಧನೆಯಾಗಿದ್ದು, ಸಂಪೂರ್ಣ ಪುತ್ತೂರು ನಗರಕ್ಕೆ ನೀಡಿದ ಕ್ರಿಸ್‌ಮಸ್ ಉಡುಗೊರೆಯಾಗಿದೆ. “ಭೂಮಿಯಲ್ಲಿ ಶಾಂತಿ, ಮಾನವರಿಗೆ ಶುಭಾಶಯ” ಎಂಬ ಸಂದೇಶವನ್ನು ಈ ನಕ್ಷತ್ರವು ಪ್ರತಿಯೊಬ್ಬರ ಹೃದಯಕ್ಕೆ ತಲುಪಿಸುತ್ತಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಯನ್ನು ಮುನ್ನಡೆಸಿದ ರಾಯ್ ಸ್ಟನ್ ರೆಬೆಲ್ಲೊ, ಜೋಯ್ ಸ್ಟನ್ ಡಿಸೋಜ, ಸ್ವಸ್ತಿಕ್ ಡಿಸೋಜ, ಪ್ರವಾನ್ ಡಿಸೋಜ, ಜೈಸನ್ ಡಿಸೋಜ, ದಿಲೀಪ್ ಡಿಸೋಜ, ಸುಶಾಂತ್ ವೇಗಸ್ ಸೇರಿದಂತೆ ಎಲ್ಲಾ ಐಸಿವೈಎಂ ಪುತ್ತೂರು ಘಟಕದ ಸದಸ್ಯರಿಗೆ ಚರ್ಚ್ ಪಾಲನಾ ಸಮಿತಿಯ ಸದಸ್ಯರು ಮತ್ತು ಸ್ಥಳೀಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page