May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರಿಸ್ಮಸ್ ಹಬ್ಬದ ದಿನವೇ ಕ್ರೈಸ್ತ ಸಮುದಾಯದ ಮೇಲೆ ದಾಳಿ, ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ – ಫಾದರ್ ಡೆನಿಸ್ ಡೇಸಾ

ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆದಿರುವ ದಾಳಿಗಳು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ಗಂಭೀರ ಹಲ್ಲೆಯಾಗಿವೆ ಎಂದು ಉಡುಪಿ ಕಥೊಲಿಕ ಧರ್ಮಕ್ಷೇತ್ರ ತೀವ್ರ ಕಳವಳ ಮತ್ತು ನೋವನ್ನು ವ್ಯಕ್ತಪಡಿಸಿದೆ. ಶಾಂತಿ, ಪ್ರೀತಿ ಮತ್ತು ಕ್ಷಮೆಯನ್ನು ಜಗತ್ತಿಗೆ ಬೋಧಿಸಿದ ಯೇಸುಸ್ವಾಮಿಯ ಜನನೋತ್ಸವವಾದ ಕ್ರಿಸ್ಮಸ್ ಈ ಬಾರಿ ಭಾರತದ ಕ್ರೈಸ್ತ ಸಮುದಾಯಕ್ಕೆ ಭಯ ಮತ್ತು ಆತಂಕವನ್ನುಂಟುಮಾಡಿದೆ. ಕರ್ನಾಟಕ ಸೇರಿದಂತೆ ಕೇರಳ, ನವದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಒಡಿಶಾ ಮುಂತಾದ ರಾಜ್ಯಗಳಲ್ಲಿ ಕ್ರಿಸ್ಮಸ್ ಆಚರಣೆಗಳ ವೇಳೆ ಮತಾಂಧ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆಗಳು ಹಬ್ಬದ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿವೆ.

ಸಂವಿಧಾನದ ತತ್ವಗಳಿಗೆ ನಿಷ್ಠೆಯೊಂದಿಗೆ ಭಾರತವನ್ನು ಸರ್ವಜನಾಂಗಗಳ ಶಾಂತಿಯ ತೋಟವೆಂದು ನಂಬಿ ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ಈ ಘಟನೆಗಳು ಆಘಾತ ತಂದಿವೆ. ಒಂದೆಡೆ ದೇಶದ ಪ್ರಧಾನ ಮಂತ್ರಿಗಳು ದೆಹಲಿಯ ಚರ್ಚ್ ಒಂದರಲ್ಲಿ ಕ್ರಿಸ್ಮಸ್ ಪ್ರಾರ್ಥನೆಗೆ ಪಾಲ್ಗೊಳ್ಳುತ್ತಿರುವಾಗ, ಮತ್ತೊಂದೆಡೆ ದೇಶದ ವಿವಿಧ ಭಾಗಗಳಲ್ಲಿ ಅದೇ ಕ್ರಿಸ್ಮಸ್ ಆಚರಣೆಗಳ ಮೇಲೆ ದಾಳಿಗಳು ನಡೆಯುತ್ತಿರುವುದು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಸಂಗತಿಯಾಗಿವೆ. ಪ್ರಧಾನ ಮಂತ್ರಿಗಳ ಕ್ರಿಸ್ಮಸ್ ಹಬ್ಬದ ಕಾಳಜಿ ಶ್ಲಾಘನೀಯವಾದರೂ, ಅವರ ಅನುಯಾಯಿಗಳೆಂದು ಗುರುತಿಸಲ್ಪಡುವ ಕೆಲವರು ದೇಶದಾದ್ಯಂತ ಕ್ರಿಸ್ಮಸ್ ಆಚರಣೆಗಳ ಮೇಲೆ ದಾಳಿ ನಡೆಸುತ್ತಿರುವುದು ಸಂವಿಧಾನಾತ್ಮಕ ಮೌಲ್ಯಗಳ ಮೇಲೆ ಹಲ್ಲೆ ಮಾಡಿದಂತಾಗಿದೆ. ಭಾರತದಲ್ಲಿ ಪ್ರತಿಯೊಂದು ಧರ್ಮಕ್ಕೂ ತನ್ನ ಆರಾಧನೆಯನ್ನು ಸ್ವತಂತ್ರವಾಗಿ ಆಚರಿಸುವ ಹಕ್ಕನ್ನು ಸಂವಿಧಾನ ಒದಗಿಸಿದೆ. ಆ ಹಕ್ಕಿಗೆ ಬೆದರಿಕೆ ಹಾಕುವ ಯಾವುದೇ ವರ್ತನೆ ಸಹನೀಯವಲ್ಲ.

ಈ ವರ್ಷದ ಕ್ರಿಸ್ಮಸ್ ಸಂದರ್ಭದಲ್ಲಿ ಕ್ರೈಸ್ತ ಬಾಂಧವರ ಮೇಲೆ ನಡೆದ ದೌರ್ಜನ್ಯಗಳು ನೋವಿನ ಬಹುಮಾನ ನೀಡಿದಂತಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳು ಇನ್ನೂ ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ದೇಶದ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಇಂತಹ ಸಂವಿಧಾನ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಅದೇ ವೇಳೆ ಕ್ರೈಸ್ತ ಸಮುದಾಯ ಹಾಗೂ ಅವರು ನಡೆಸುತ್ತಿರುವ ಎಲ್ಲಾ ಸಂಸ್ಥೆಗಳಿಗೆ ಸಮರ್ಪಕ ಭದ್ರತೆ ಒದಗಿಸುವಂತೆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವವರು ಎಲ್ಲಾ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಉಡುಪಿ ಕಥೊಲಿಕ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾದರ್ ಡೆನಿಸ್ ಡೇಸಾ ಅವರು ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page