May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸರಕಾರಿ ಬಸ್‌ಗೆ ಟಿಪ್ಪರ್ ಢಿಕ್ಕಿ: 18 ಮಂದಿ ಗಾಯ; ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ

ವೇಗವಾಗಿ ಬಂದ ಮಣ್ಣು ಸಾಗಾಟದ ಟಿಪ್ಪರ್ ಲಾರಿಯೊಂದು KSRTC ಬಸ್‌ಗೆ ಢಿಕ್ಕಿಯಾದ ಪರಿಣಾಮ 18 ಮಂದಿ ಗಾಯಗೊಂಡ ಘಟನೆ ತಲ್ಲೂರು–ನೇರಳಕಟ್ಟೆ ಮುಖ್ಯ ರಸ್ತೆಯ ಶೆಟ್ರಕಟ್ಟೆ ತಿರುವಿನಲ್ಲಿ ಜನವರಿ 5ರಂದು ಸೋಮವಾರ ಸಂಜೆ ಸಂಭವಿಸಿದೆ. ಗಾಯಗೊಂಡವರ ಪೈಕಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳ ಪೈಕಿ ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಏಳು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಮೂವರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಐವರು ಒಳರೋಗಿಗಳಾಗಿದ್ದಾರೆ. ಚಿನ್ಮಯಿ ಆಸ್ಪತ್ರೆಯಲ್ಲಿ ಒಬ್ಬರು ಒಳರೋಗಿಯಾಗಿ ದಾಖಲಾಗಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ:

ಗಂಭೀರ ಗಾಯಗೊಂಡ ಜೂನಿಯರ್ ಕಾಲೇಜು ವಿದ್ಯಾರ್ಥಿನಿಯರಾದ 16 ವರ್ಷ ಪ್ರಾಯದ ಚೈತ್ರಾ ಹಾಗೂ 16 ವರ್ಷ ಪ್ರಾಯದ ಅರ್ಚನಾ ಇಬ್ಬರೂ ನೇರಳಕಟ್ಟೆ ನಿವಾಸಿಗಳಾಗಿದ್ದಾರೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಜ್ರಿ ಗ್ರಾಮ ಪಂಚಾಯತ್ ಸದಸ್ಯೆ 50 ವರ್ಷ ಪ್ರಾಯದ ಶಾರದಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಟಿಪ್ಪರ್ ಚಾಲಕ 40 ವರ್ಷ ಪ್ರಾಯದ ರಾಘವೇಂದ್ರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರ್ಶ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ (16), ಆಶಿಶ್ (16), ಅಭಿಲಾಶ್ (16), ಸತ್ಯವತಿ (16), ಪ್ರಯಾಣಿಕರಾದ ಮಂಜುನಾಥ್ (43), ಮಮತಾ ಆಜಿ (37), ಸನ್ವಿತ್ (8) ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹರೀಶ್ (15), ಸ್ಪಂದನಾ (16) ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಮತಿ (35), ಸಾವಿತ್ರಿ (50), ಸುಜಾನ್ (15) ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಮುಖಾಮುಖಿ ಅಪಘಾತ ತಪ್ಪಿಸಿದ ಬಸ್ ಚಾಲಕ

ಕುಂದಾಪುರದಿಂದ ಸಂಜೆ 3.45ರ ಸುಮಾರಿಗೆ ಆಜ್ರಿಗೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್, ಶೆಟ್ರಕಟ್ಟೆ ಸಮೀಪ ಪ್ರಯಾಣಿಕರೊಬ್ಬರನ್ನು ಇಳಿಸಿ ಮುಂದಕ್ಕೆ ಚಲಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಬಸ್ಸಿನ ಬದಿಗೆ ಢಿಕ್ಕಿ ಹೊಡೆದಿದೆ. ಟಿಪ್ಪರ್ ವೇಗವಾಗಿ ಬರುತ್ತಿರುವುದನ್ನು ಗಮನಿಸಿದ ಬಸ್ ಚಾಲಕ ಎಡಕ್ಕೆ ತಿರುಗಿಸಿದ್ದರಿಂದ ಮುಖಾಮುಖಿ ಅಪಘಾತ ತಪ್ಪಿತು. ಆದರೆ ಬಸ್ಸಿನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟಿಪ್ಪರ್‌ನ ಮುಂಭಾಗವೂ ಜಖಂಗೊಂಡಿದೆ. ಸ್ಥಳೀಯರು ಹಾಗೂ ಪ್ರಯಾಣಿಕರು ತಕ್ಷಣ ಗಾಯಾಳುಗಳನ್ನು ಆಂಬುಲೆನ್ಸ್‌ ಹಾಗೂ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಿದರು. ಟಿಪ್ಪರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಸ್ಪತ್ರೆಗಳಿಗೆ ಜನಪ್ರತಿನಿಧಿಗಳ ಭೇಟಿ:

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಂಡಾಜೆ ಅವರು ಕುಂದಾಪುರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾವ್ಯಕ್ಕಿ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿದರು.

ಎಸ್ಪಿ ಭೇಟಿ, ತನಿಖೆ ಘೋಷಣೆ:

ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರು ಮಣಿಪಾಲ, ಕುಂದಾಪುರ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಅಪಘಾತ ಸ್ಥಳಕ್ಕೂ ಭೇಟಿ ನೀಡಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಟ್ಟು 18 ಮಂದಿ ಗಾಯಗೊಂಡಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಅಕ್ರಮ ಮಣ್ಣು ಸಾಗಾಟ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿ ಅಕ್ರಮ ಸಾಗಾಟ ತಡೆಗೆ 29 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ ಎಂದರು.

ಸುಳ್ಳು ಸುದ್ದಿ ಹರಡಿ ಆತಂಕ:

ಅಪಘಾತದಲ್ಲಿ ಸಾವು ಸಂಭವಿಸಿದೆ ಎನ್ನುವ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ವಿದ್ಯಾರ್ಥಿಗಳ ಪೋಷಕರು ಆತಂಕಗೊಂಡು ಆಸ್ಪತ್ರೆಗಳಿಗೆ ಧಾವಿಸಿದರು. ಆಸ್ಪತ್ರೆ ಮುಂದೆ ಭಾರಿ ಜನಸ್ತೋಮ ಜಮಾಯಿಸಿದ್ದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿಕಿತ್ಸಾ ವೆಚ್ಚ ನಿಗಮ ಭರಿಸಲಿದೆ:

ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು KSRTC ಭರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ರವರು ತಿಳಿಸಿದ್ದಾರೆ ಎಂದು ಡಿಪೊ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page