ರಾಸಲೀಲೆ ವಿಡಿಯೋ ವೈರಲ್ ಪ್ರಕರಣ – ಡಿಜಿಪಿ ಕೆ. ರಾಮಚಂದ್ರ ರಾವ್ ಅಮಾನತು
ಸರ್ಕಾರದಿಂದ ತನಿಖೆಗೆ ಆದೇಶ

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಡಿಜಿಪಿ ರಾಮಚಂದ್ರ ರಾವ್ ತಪ್ಪು ಎಸಗಿರುವುದು ಸಾಬೀತಾದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಜನವರಿ 19ರಂದು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

ವೈರಲ್ ಆಗಿರುವ ರಾಸಲೀಲೆ ವಿಡಿಯೋ ಕುರಿತು ಸ್ಪಷ್ಟನೆ ನೀಡುವ ಉದ್ದೇಶದಿಂದ ಡಿಜಿಪಿ ರಾಮಚಂದ್ರ ರಾವ್ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಆದರೆ ಸಚಿವರು ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಸಮವಸ್ತ್ರದಲ್ಲೇ ಕಚೇರಿಯಲ್ಲಿ ಕುಳಿತು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಈ ಪ್ರಕರಣವು ಪೊಲೀಸ್ ಇಲಾಖೆಯ ಗೌರವ ಹಾಗೂ ಶಿಸ್ತು ಕುರಿತಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದಕ್ಕೂ ಮೊದಲು ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳು, ನಟಿ ರನ್ಯಾ ರಾವ್ ಅವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವುದು ಗಮನಾರ್ಹವಾಗಿದೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತನಿಖೆಯ ನಂತರವೇ ತಿಳಿಯಲಿದ್ದು, ಸರ್ಕಾರ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ.




