July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾನವೀಯತೆಯ ನೂರು ವಸಂತಗಳು – ಮಂಗಳೂರಿನಲ್ಲಿ ಎಸ್.ಎಸ್.ವಿ.ಪಿ. ಶತಮಾನೋತ್ಸವ ಸಮಾರೋಪದ ಭವ್ಯ ಸಂಭ್ರಮ

ಜನವರಿ 25ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆಂಷನ್ ಸೆಂಟರ್ ಸಭಾಂಗಣದಲ್ಲಿ ಜರುಗಲಿರುವ ಕಾರ್ಯಕ್ರಮ

ಎಸ್‌.ಎಸ್‌.ವಿ‌.ಪಿ. ಎಂದು ಜನಪ್ರಿಯವಾಗಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಸೇವಾ ಪಯಣದ ನೂರು ವರ್ಷಗಳ ಸಾರ್ಥಕ ಸಂಭ್ರಮವನ್ನು ಅತ್ಯಂತ ಭಕ್ತಿಭಾವ ಮತ್ತು ಘನತೆಯಿಂದ ಆಚರಿಸುತ್ತಿದೆ. ಈ ಐತಿಹಾಸಿಕ ಶತಮಾನೋತ್ಸವದ ಸಮಾರೋಪ ಸಮಾರಂಭವು ಜನವರಿ 25ರ ಭಾನುವಾರ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆಂಷನ್ ಸೆಂಟರ್ ಸಭಾಂಗಣದಲ್ಲಿ ಜರುಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಲಿದ್ದು, ಎಸ್‌.ಎಸ್‌.ವಿ‌.ಪಿ. ಅಂತರಾಷ್ಟ್ರೀಯ ಅಧ್ಯಕ್ಷರಾದ ಯುವಾನ್ ಮ್ಯಾನುಯೆಲ್ ಬ್ಯುರ್ಗೊ ಗೊಮೆಜ್ (ಸ್ಪೇನ್) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಎಸ್‌.ಎಸ್‌.ವಿ‌.ಪಿ. ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಜೂಡ್ ಮಂಗಳರಾಜ್, ಹಾಗೂ ಅಂತರಾಷ್ಟ್ರೀಯ ಓಂಬುಡ್ಸ್‌ಮನ್ ಜೋಸೆಫ್ ಪಾಂಡಿಯನ್ ಉಪಸ್ಥಿತರಿರುವರು.

ಇದಲ್ಲದೆ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾವುಸ್ಟಿನ್ ಲೂಕಾಸ್ ಲೋಬೊ, ಖ್ಯಾತ ಉದ್ಯಮಿ–ದಾನಿ ಜೋಸೆಫ್ ಎಲಿಯಾಸ್ ಮಿನೇಜಸ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ಎಸ್‌.ಎಸ್‌.ವಿ‌.ಪಿ. ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಯಾಗು ಮಾಣಿಕ್ಯಂ, ಆಶಾ ವಾಜ್, ಹಾಗೂ ಯುವ ಪ್ರತಿನಿಧಿ ಅಲಿಸ್ಟರ್ ನಜರೆತ್ ಉಪಸ್ಥಿತರಿರುವರು.

ಮಂಗಳೂರಿನಲ್ಲಿ ಸೇವೆಯ ಶತಮಾನ:

ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನಲ್ಲಿ 1926ರ ಜನವರಿ 10ರಂದು ಬೆಂದೂರ್ ಚರ್ಚ್‌ನಲ್ಲಿ ಸ್ಥಾಪನೆಯಾಯಿತು. ಅದೇ ತಿಂಗಳಲ್ಲಿ ಮಿಲಾಗ್ರಿಸ್ ಘಟಕ, ಹಾಗೂ ಮೇ ತಿಂಗಳಲ್ಲಿ ರೊಸಾರಿಯೊ ಕ್ಯಾಥೆಡ್ರಲ್ ಮತ್ತು ಬಿಜೈ ಚರ್ಚ್ ಘಟಕಗಳು ಸ್ಥಾಪನೆಗೊಂಡವು.

ಬಡವರು ಮತ್ತು ನಿರ್ಗತಿಕರನ್ನು ಮನೆಮನೆಗೆ ಭೇಟಿ ಮಾಡಿ, ಗೌಪ್ಯತೆಯನ್ನು ಕಾಪಾಡಿಕೊಂಡೇ ನೆರವು ನೀಡುವುದು ಈ ಸಂಸ್ಥೆಯ ಪ್ರಮುಖ ಸೇವಾ ಧ್ಯೇಯ. ಪ್ರಸ್ತುತ ಮಂಗಳೂರು ಸೆಂಟ್ರಲ್ ಕೌನ್ಸಿಲ್ ಅಧೀನದಲ್ಲಿ 111 ಘಟಕಗಳು ಮತ್ತು 2 ಯುವ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 1618 ಸದಸ್ಯರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಘಟಕವು ಕನಿಷ್ಠ ಐದು ಕುಟುಂಬಗಳನ್ನು ದತ್ತು ಪಡೆದು, ಒಟ್ಟು 623 ಕುಟುಂಬಗಳ 1765 ಸದಸ್ಯರಿಗೆ ನಿರಂತರ ನೆರವು ಒದಗಿಸುತ್ತಿದೆ.

ಆರೋಗ್ಯ ಮತ್ತು ಶಿಕ್ಷಣದಲ್ಲಿ ಮಹತ್ವದ ಕೊಡುಗೆ:

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ (ಮಂಗಳೂರು ಮತ್ತು ತುಂಬೆ) ಸಹಯೋಗದೊಂದಿಗೆ ದತ್ತು ಕುಟುಂಬಗಳಿಗೆ ಉಚಿತ ವೈದ್ಯಕೀಯ ಹಾಗೂ ಡಯಾಲಿಸಿಸ್ ಸೇವೆ ಒದಗಿಸುವ ಯೋಜನೆ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ.

ಶತಮಾನೋತ್ಸವದ ಸವಿನೆನಪಿಗಾಗಿ ಎರಡು ಮಹತ್ವದ ಯೋಜನೆಗಳನ್ನು ರೂಪಿಸಲಾಗಿದೆ:

  • ‘ಶಿಕಪ್’ – ದತ್ತು ಕುಟುಂಬಗಳ 405 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಹಾಯ
  • ‘ಆಸ್ರೊ’ – ನೂರು ಕುಟುಂಬಗಳಿಗೆ ಮನೆ ನಿರ್ಮಾಣ ಅಥವಾ ದುರಸ್ತಿ ಸಹಾಯ

ಇದೇ ಸಂದರ್ಭದಲ್ಲಿ ಟ್ರಿನಿಟಿ ಮೆಡಿಕೇರ್ ಸರ್ವಿಸಸ್ ಟ್ರಸ್ಟ್, ಉಡುಪಿ ಸಹಯೋಗದೊಂದಿಗೆ SSVP–TRINITY KIDNEY CARE PROJECT ಆರಂಭಗೊಳ್ಳಲಿದ್ದು, ಕಿಡ್ನಿ ವೈಫಲ್ಯದಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ಹಾಗೂ ಡಯಾಲಿಸಿಸ್ ವೆಚ್ಚಕ್ಕೆ ನೆರವು ನೀಡಲಿದೆ.

ವಿಶ್ವವ್ಯಾಪಿ ಸೇವಾ ಪರಂಪರೆ:

1833ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ವಂದನೀಯ ಫ್ರೆಡ್ರಿಕ್ ಒಜಾನಮ್ ಮತ್ತು ಅವರ ಸಹಚರರಿಂದ ಸ್ಥಾಪಿತವಾದ ಈ ಸಂಸ್ಥೆ ಇಂದು 158 ದೇಶಗಳಲ್ಲಿ, 8 ಲಕ್ಷಕ್ಕೂ ಅಧಿಕ ಸದಸ್ಯರು ಮತ್ತು 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರೊಂದಿಗೆ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಭಾರತದಲ್ಲಿ 1863ರಲ್ಲಿ ಮುಂಬಯಿಯಲ್ಲಿ ಆರಂಭಗೊಂಡು, ಇಂದು 7225 ಘಟಕಗಳು ಮತ್ತು 65,546 ಸದಸ್ಯರನ್ನು ಹೊಂದಿದೆ.

ಇಂದು ಜನವರಿ 22ರಂದು ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ಜ್ಯೋ ಕುವೆಲ್ಲೊ, ಕಾರ್ಯದರ್ಶಿ ಲಿಗೊರಿ ಫೆರ್ನಾಂಡಿಸ್, ಕೋಶಾಧಿಕಾರಿ ಕ್ಲೆರೆನ್ಸ್ ಮಚಾದೊ, ಶತಮಾನೋತ್ಸವ ಸಂಚಾಲಕಿ ಫಿಲೋಮಿನಾ ಮಿನೇಜಸ್ ಹಾಗೂ ಮಾಧ್ಯಮ ಸಂಚಾಲಕ ಲೊಯ್ಡ್ ರೇಗೊ ಉಪಸ್ಥಿತರಿದ್ದರು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page