August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತಾಳ್ಮೆಯ ಮೂಲಕ ಪಡೆಯುವ ಯಶಸ್ಸನ್ನು ಯಾರೂ ತಡೆಯಲು ಸಾಧ್ಯವಿಲ್ಲ – ಸ್ಪೀಕರ್ ಯು.ಟಿ. ಖಾದರ್

ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಸಂದೇಶ

ತಾಳ್ಮೆಯ ಮೂಲಕ ನಾವು ಸಾಧಿಸುವ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಿರಿಯರು ತೋರಿದ ತ್ಯಾಗ ಮತ್ತು ಸಹನಶೀಲತೆಯನ್ನು ಯುವಜನತೆ ಅರಿತು ಬದುಕಬೇಕು ಎಂದು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಹೇಳಿದರು. ಜನವರಿ 25ರಂದು ಭಾನುವಾರ ನಡೆದ ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ; ಅವು ನಮ್ಮ ಮಣ್ಣಿನ ಶಕ್ತಿ. ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬರಿಗೆ ನೋವು ನೀಡುವ ಕತ್ತಿಯಾಗದೆ, ಗಾಯಗಳನ್ನು ಗುಣಪಡಿಸುವ ಮುಲಾಮಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಎನ್‌ಕೆಎಂ ಶಾಫಿ ಸ‌ಅದಿ ಮಾತನಾಡಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ನಮ್ಮ ಶಕ್ತಿಯಾಗಬೇಕು. ಕೇವಲ ಭೌತಿಕ ವಿಚಾರಗಳ ಚೌಕಟ್ಟಿನಲ್ಲಿ ಸೀಮಿತವಾದ ಬದುಕಿನಿಂದ ಸಮುದಾಯದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ ಎಂದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿ, ಕಾಜೂರು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ. ಸರಕಾರದ ವಸತಿ ಶಾಲೆಗಳು, ಉನ್ನತ ಶಿಕ್ಷಣಕ್ಕೆ ಇರುವ ಪ್ರೋತ್ಸಾಹಗಳು, ಸ್ಕಾಲರ್‌ಶಿಪ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. 2014ರಿಂದ ಇಸ್ಲಾಂನ ತಪ್ಪು ವ್ಯಾಖ್ಯಾನ ಹೆಚ್ಚಾಗಿದ್ದು, ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಅದನ್ನು ಎದುರಿಸುವ ಶಕ್ತಿ ಸಮಾಜಕ್ಕಿರಬೇಕು ಎಂದು ಹೇಳಿದರು.

ಶಿಕ್ಷಣ ತಜ್ಞ ಡಾ. ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಸಖಾಫಿ ಮಾತನಾಡಿ, ಅರಿವು ಎಂದರೆ ಕೇವಲ ಅಕ್ಷರಜ್ಞಾನವಲ್ಲ. ಶಿಕ್ಷಣಕ್ಕಿಂತ ನೈತಿಕ ಪ್ರಗತಿ ಬಹುಮುಖ್ಯ. ತಂತ್ರಜ್ಞಾನದಿಂದ ಮಾಹಿತಿ ಸಿಕ್ಕರೂ ಮಾನವೀಯ ಮೌಲ್ಯಗಳಿಲ್ಲದೆ ಪ್ರಯೋಜನವಿಲ್ಲ ಎಂದರು.

ವಿದ್ವಾಂಸ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ಮತೀಯತೆ ಮತ್ತು ಮಾದಕತೆ ವೇಗವಾಗಿ ಹರಡುತ್ತಿದೆ. ಇದಕ್ಕೆ ಎಚ್ಚರ ವಹಿಸಿ, ಎಲ್ಲರನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ವಕ್ಫ್ ನಿಕಟ ಪೂರ್ವಾಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ನಡೆಸಿಕೊಟ್ಟರು. ಮಾಜಿ ಸಚಿವ ಬಿ. ರಾಮನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕ ಮೊಯಿದಿನ್ ಬಾವಾ ಸೇರಿದಂತೆ ಹಲವರು ಉಪಸ್ಥಿತರಿದ್ದು ಮಾತನಾಡಿದರು. ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ವಿಶೇಷ ದುಆ ಪ್ರಾರ್ಥನೆ ನಡೆಯಿತು.

ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಸ್ವಾಗತಿಸಿ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page