August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆ

ನ್ಯಾಯಾಲಯಗಳು ಜನಸಾಮಾನ್ಯರ ನ್ಯಾಯದ ಆಶ್ರಯ ಕೇಂದ್ರಗಳು – ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್

ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಮೂಲ ಕರ್ತವ್ಯವಾಗಿದ್ದು, ನ್ಯಾಯಾಂಗ ವ್ಯವಸ್ಥೆ ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹೇಳಿದರು. ಅವರು ಜನವರಿ 31ರಂದು ಶನಿವಾರ ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯಾಲಯವು ಕಾನೂನಿನ ಆಡಳಿತದ ಸಂಕೇತವಾಗಿದ್ದು, ಸಮಾಜದಲ್ಲಿ ಅನ್ಯಾಯದ ವಿರುದ್ಧ ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತೆ ಕಾರ್ಯನಿರ್ವಹಿಸುತ್ತದೆ ಎಂದರು. ಜನರಿಗೆ ತ್ವರಿತ ಹಾಗೂ ಸುಲಭವಾಗಿ ನ್ಯಾಯ ಒದಗಿಸಲು ಆಧುನಿಕ ಕಟ್ಟಡಗಳು ಮತ್ತು ತಂತ್ರಜ್ಞಾನ ಅತ್ಯವಶ್ಯಕವಾಗಿದೆ. ಇಂತಹ ಸೌಲಭ್ಯಗಳು ನ್ಯಾಯಾಂಗ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನ ರಚನೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆನಗಲ್ ನರಸಿಂಹರಾವ್ ಅವರು ಮಹತ್ತರ ಪಾತ್ರ ವಹಿಸಿದ್ದು, ಸಂವಿಧಾನದ ಹಲವು ಪ್ರಮುಖ ಅಂಶಗಳನ್ನು ರೂಪಿಸುವಲ್ಲಿ ಅವರು ನೀಡಿದ ಕೊಡುಗೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಗುರುತಿಸಿದ್ದರು ಎಂದು ನ್ಯಾ. ಅಬ್ದುಲ್ ನಝೀರ್ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಾಲಯಗಳ ಸುಸಜ್ಜಿತ ಕಟ್ಟಡಗಳ ಜೊತೆಗೆ ನ್ಯಾಯಾಧೀಶರ ನಿಷ್ಠೆ, ನ್ಯಾಯವಾದಿಗಳ ಬದ್ಧತೆ ಹಾಗೂ ನ್ಯಾಯಾಲಯ ಸಿಬ್ಬಂದಿಯ ಕರ್ತವ್ಯನಿಷ್ಠೆಯೂ ನ್ಯಾಯ ಒದಗಿಸಲು ಅತ್ಯಂತ ಅಗತ್ಯವೆಂದು ಹೇಳಿದರು. ಪುತ್ತೂರಿನ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟು 12 ನ್ಯಾಯಾಲಯ ಸಭಾಂಗಣಗಳಿದ್ದು, ಆಧುನಿಕ ಶೈಲಿಯಲ್ಲಿ ನಿರ್ಮಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಆರೋಗ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪುತ್ತೂರು ನ್ಯಾಯಾಲಯ ಕಟ್ಟಡವು ರಾಜ್ಯದಲ್ಲೇ ತಾಲೂಕು ಕೇಂದ್ರದಲ್ಲಿರುವ ಅತಿ ದೊಡ್ಡ ನ್ಯಾಯಾಲಯ ಕಟ್ಟಡವಾಗಿದೆ. ಇಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಮಂಗಳೂರಿನಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ನ್ಯಾಯಾಲಯ ಕಟ್ಟಡ ಬ್ಲಾಕ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಬೆಳ್ತಂಗಡಿಯಲ್ಲಿ 9 ಕೋಟಿ ರೂಪಾಯಿ ವೆಚ್ಚದ ಹೊಸ ನ್ಯಾಯಾಲಯ ಕಟ್ಟಡಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ ಮಾಡಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರು ನ್ಯಾಯಾಲಯ ಸಂಕೀರ್ಣಕ್ಕೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ನೆರವು ನೀಡಲಿದೆ. ಪುತ್ತೂರು ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಭರತ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಅವರು ಸ್ವಾಗತಿಸಿದರು.

You may also like

News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ

You cannot copy content of this page