May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಲ್ಲುರ್ಟಿ ದೈವ ಮಹಿಮೆಯ ‘ಸತ್ಯ ದೇವತೆ’ ಭಕ್ತಿಗೀತೆ ಬಿಡುಗಡೆ

ಗಂಗಾ ಪ್ರತಿಷ್ಠಾನ ಕುಮಾರಪುರ ಅರ್ಪಿಸಿರುವ ‘ನಮ್ಮ ಕೊಂಬಾರು – ಸಂಸ್ಕೃತಿಯ ತೇರು’ ಯೂಟ್ಯೂಬ್ ವಾಹಿನಿಯಲ್ಲಿ ಕಾರಣೀಕದ ಕಲ್ಲುರ್ಟಿ ದೈವದ ಕುರಿತ ಹೊಸ ಭಕ್ತಿಗೀತೆ ‘ಸತ್ಯ ದೇವತೆ’ ಫೆಬ್ರವರಿ 1ರಂದು ಭಾನುವಾರ ಬಿಡುಗಡೆಗೊಂಡಿದೆ. ಈಗಾಗಲೇ ಕಲ್ಲುರ್ಟಿ ಕಥನ ಹಾಗೂ ಸಿಂಗಾರೊದ ಸಿರಿ ದೃಶ್ಯಕಾವ್ಯಗಳಿಗೆ ಸಾಹಿತ್ಯ ನೀಡಿರುವ ಲೇಖಕ ಹಾಗೂ ಜಾನಪದ ಚಿಂತಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಈ ಗೀತೆಯ ಸಾಹಿತ್ಯ ರಚಿಸಿದ್ದಾರೆ.

ಕರಾವಳಿ ಭಾಗದಲ್ಲಿ ಶಕ್ತಿದೇವತೆಯಾಗಿ ಅಪಾರ ಭಕ್ತಿಯಿಂದ ಪೂಜಿಸಲ್ಪಡುವ ಶ್ರೀ ಕಲ್ಲುರ್ಟಿ ದೈವದ ಮಹಿಮೆಯನ್ನು ಈ ಗೀತೆ ಒಳಗೊಂಡಿದೆ. ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕ್ಷೇತ್ರದಲ್ಲಿ ದಿ. ಪುಳಿಂಚ ರಾಮಯ್ಯ ಶೆಟ್ಟರು ಕಾಡಕಲ್ಲಿನ ಮೂಲಕ ಕಲ್ಲುರ್ಟಿ ದೈವ ಆರಾಧನೆಯನ್ನು ಆರಂಭಿಸಿದ್ದರು. ಅವರ ನಂತರ ಪುತ್ರರಾದ ಮಂಗಳೂರಿನ ಯುವ ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟರು ನೂತನವಾಗಿ ದೈವಸ್ಥಾನವನ್ನು ನಿರ್ಮಿಸಿ, ಅಗೆಲು ಸೇವೆ, ಕೋಲ ಹಾಗೂ ಉತ್ಸವಗಳನ್ನು ವಿಧಿವಿಧಾನಗಳೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ.

ನಂಬಿದವರಿಗೆ ಇಂಬು ನೀಡುವ, ಪವಾಡಗಳ ಮೂಲಕ ಕಷ್ಟನಿವಾರಣೆ ಮಾಡುವ ಚೆಂಡೆ ಕಲ್ಲುರ್ಟಿ ಅಮ್ಮನನ್ನು ಸ್ಥಳೀಯರಷ್ಟೇ ಅಲ್ಲದೆ ಸುತ್ತಮುತ್ತಲ ಹಳ್ಳಿಗಳ ಭಕ್ತರು ‘ಚೆಂಡೆದಪ್ಪೆ’ ಎಂದು ನಂಬಿ ಹರಕೆ ಸಲ್ಲಿಸುತ್ತಿದ್ದಾರೆ. ತ್ರೈವಾರ್ಷಿಕ ಉತ್ಸವ, ಹರಕೆ ಕೋಲ ಹಾಗೂ ಅಗೆಲು ಸೇವೆಗಳ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರಿ ದೈವದ ದರ್ಶನ ಪಡೆಯುವುದು ಅಪೂರ್ವ ದೃಶ್ಯವಾಗಿರುತ್ತದೆ.

‘ಸತ್ಯ ದೇವತೆ’ ಎಂಬ ಈ ಭಕ್ತಿಗೀತೆಯನ್ನು ಖ್ಯಾತ ಗಾಯಕ ಎಂ. ರವೀಂದ್ರ ಪ್ರಭು ಅವರು ಸುಮಧುರವಾಗಿ ಹಾಡಿದ್ದಾರೆ. ಧ್ವನಿಸುರುಳಿ ನಿರ್ಮಾಣವನ್ನು ಪುಳಿಂಚ ಶ್ರೀಧರ ಶೆಟ್ಟಿ ವಹಿಸಿಕೊಂಡಿದ್ದಾರೆ. ಗೀತೆಗೆ ಬೆಂಗಳೂರಿನ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ಕಟ್ಟೆ ಅವರು ಸೂಕ್ತ ದೃಶ್ಯ ಸಂಯೋಜನೆ ಮಾಡಿದ್ದು, ‘ನಮ್ಮ ಕೊಂಬಾರು – ಸಂಸ್ಕೃತಿಯ ತೇರು’ ವಾಹಿನಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಅಪೂರ್ವ ದೃಶ್ಯ–ಶ್ರಾವ್ಯ ಕಾವ್ಯ ಈಗ ಜಾಲತಾಣಗಳಲ್ಲಿ ಲಭ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಿರ್ಮಾಪಕರು ವಿನಂತಿಸಿದ್ದಾರೆ.

You may also like

News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು
News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC

You cannot copy content of this page