May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12ರಂದು ಅಖಿಲ ಭಾರತ ಮಹಾಮುಷ್ಕರ: ರೈತ–ಕಾರ್ಮಿಕರ ಎಚ್ಚರಿಕೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ನೀತಿಗಳು, 29 ಪ್ರಮುಖ ಕಾರ್ಮಿಕ ಕಾನೂನುಗಳ ರದ್ದತಿ, ನಾಲ್ಕು ಕಾರ್ಮಿಕ ಸಂಹಿತೆಗಳು, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ತಂದಿರುವ ತಿದ್ದುಪಡಿಗಳ ವಿರುದ್ಧ ಫೆಬ್ರವರಿ 12ರಂದು ರೈತ–ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಕಾರ್ಮಿಕ ವರ್ಗದ ಹಕ್ಕುಗಳನ್ನು ಹತ್ತಿಕ್ಕುವ ಉದ್ದೇಶದಿಂದ ಕಾರ್ಮಿಕ ಚಳುವಳಿಯನ್ನು ದುರ್ಬಲಗೊಳಿಸುತ್ತಿದ್ದು, ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರ ದೀರ್ಘ ಹೋರಾಟದ ಫಲವಾಗಿ ದೊರೆತ ಕನಿಷ್ಠ ವೇತನ, ಕೆಲಸದ ಸಮಯದ ಮಿತಿ, ಸಂಘಟನೆ ಹಾಗೂ ಮುಷ್ಕರದ ಹಕ್ಕು, ಸಾಮಾಜಿಕ ಭದ್ರತೆ ಸೇರಿದಂತೆ ಮೂಲಭೂತ ಹಕ್ಕುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳ ಮೂಲಕ ಕಿತ್ತುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವೇತನ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಉದ್ಯೋಗ ಭದ್ರತೆ–ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಗಳನ್ನು 2025ರ ನವೆಂಬರ್ 21ರಿಂದ ಜಾರಿಗೊಳಿಸುವ ಅಧಿಸೂಚನೆ ಹೊರಡಿಸಲಾಗಿದ್ದು, ಸಂಸತ್ತಿನಲ್ಲಿ ಸಮರ್ಪಕ ಚರ್ಚೆಯಿಲ್ಲದೆ ಹಾಗೂ ಕಾರ್ಮಿಕ ಸಂಘಟನೆಗಳ ವಿರೋಧವನ್ನು ಲೆಕ್ಕಿಸದೆ ಈ ಸಂಹಿತೆಗಳನ್ನು ಅಂಗೀಕರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿದ ದಿನಗೂಲಿ ರೂಪಾಯಿ 178 ಸಂಪೂರ್ಣ ಅಸಮರ್ಪಕವಾಗಿದ್ದು, ಡಾ. ಅನೂಪ್ ಸತ್ಪತಿ ಸಮಿತಿ ಶಿಫಾರಸು ಮಾಡಿದ ರೂಪಾಯಿ 375 ಕನಿಷ್ಠ ವೇತನವನ್ನೂ ಸರ್ಕಾರ ತಿರಸ್ಕರಿಸಿದೆ. ಇಪಿಎಫ್ ವೇತನ ಮಿತಿಯನ್ನು ರೂಪಾಯಿ 15,000 ಮತ್ತು ಇಎಸ್ಐ ಮಿತಿಯನ್ನು ರೂಪಾಯಿ 21,000ಕ್ಕೆ ಸೀಮಿತಗೊಳಿಸುವ ಮೂಲಕ ಲಕ್ಷಾಂತರ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯಿಂದ ಹೊರಗಿಡಲಾಗುತ್ತಿದೆ ಎಂದು ಹೇಳಿದರು.

ಹೊಸ ಸಂಹಿತೆಗಳಲ್ಲಿ ಸಂಘಟನೆ ಮತ್ತು ಮುಷ್ಕರ ಹಕ್ಕುಗಳನ್ನು ನಿರ್ಬಂಧಿಸಲಾಗಿದ್ದು, ಮುಷ್ಕರಕ್ಕೆ 60 ದಿನಗಳ ಮುಂಚಿತ ನೋಟಿಸ್ ಕಡ್ಡಾಯಗೊಳಿಸಲಾಗಿದೆ. ಸಂಧಾನ ನಡೆಯುವ ಅವಧಿಯಲ್ಲಿ ಮುಷ್ಕರ ನಡೆಸುವುದನ್ನೇ ಅಪರಾಧವೆಂದು ಘೋಷಿಸಿರುವುದು ಸಂವಿಧಾನ ಹಾಗೂ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಒಪ್ಪಂದಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು “ವಿಕಸಿತ್ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025” ಎಂದು ಬದಲಾಯಿಸುವ ಮೂಲಕ ಗ್ರಾಮೀಣ ಬಡವರ ಬದುಕಿಗೆ ಗಂಭೀರ ಪೆಟ್ಟು ನೀಡಲಾಗಿದೆ. ಜೊತೆಗೆ ವಿಮಾ ಕ್ಷೇತ್ರದಲ್ಲಿ ಶೇಕಡಾ 100 ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಿರುವುದು ದೇಶೀಯ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ. ಕರಡು ಬೀಜ ಮಸೂದೆ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಗಳು ರೈತರು, ಗ್ರಾಹಕರು ಮತ್ತು ಸಾರ್ವಜನಿಕ ವಲಯಕ್ಕೆ ಹಾನಿಕಾರಕವಾಗಿವೆ ಎಂದು ತಿಳಿಸಿದರು.

ಫೆಬ್ರವರಿ 5,6,7ರಂದು ಜಿಲ್ಲೆಯಾದ್ಯಂತ ವಾಹನ ಜಾಥಾ

ಅಖಿಲ ಭಾರತ ಮಹಾಮುಷ್ಕರದ ಸಂದೇಶವನ್ನು ಜನಸಾಮಾನ್ಯರೊಳಗೆ ಕೊಂಡೊಯ್ಯುವ ಉದ್ದೇಶದಿಂದ ಫೆಬ್ರವರಿ 5, 6 ಮತ್ತು 7ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾಹನ ಪ್ರಚಾರ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 5ರಂದು ಬೆಳಿಗ್ಗೆ 9.30ಕ್ಕೆ ನಗರದ ಲೇಡಿಗೋಷನ್ ಬಳಿ ಜಾಥಾ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ. ಉದ್ಘಾಟಿಸಲಿದ್ದಾರೆ. ಬ್ಯಾಂಕ್ ನೌಕರರ ರಾಜ್ಯ ನಾಯಕರು ವಿನ್ಸೆಂಟ್ ಡಿಸೋಜ ಮತ್ತು ಬಿ.ಎಂ. ಮಾಧವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾಥಾ ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ಯೆಯ್ಯಾಡಿ ಜಂಕ್ಷನ್‌ನಲ್ಲಿ ಸಮಾರೋಪಗೊಳ್ಳಲಿದೆ.

ಫೆಬ್ರವರಿ 12ರಂದು ಜಿಲ್ಲೆಯಾದ್ಯಂತ ರಸ್ತೆತಡೆ

ಅಖಿಲ ಭಾರತ ಮಹಾಮುಷ್ಕರದ ದಿನವಾದ ಫೆಬ್ರವರಿ 12ರಂದು ಬೆಳಿಗ್ಗೆ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಾಲೂಕು ಮತ್ತು ವಲಯ ಕೇಂದ್ರಗಳನ್ನು ಸೇರಿಸಿ 25ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ರಸ್ತೆತಡೆ ಚಳುವಳಿ ನಡೆಯಲಿದೆ. ಕಾರ್ಮಿಕರು, ರೈತರು, ವಿದ್ಯಾರ್ಥಿ–ಯುವಜನರು, ಮಹಿಳೆಯರು, ದಲಿತ–ಆದಿವಾಸಿಗಳು ಸೇರಿದಂತೆ ನೂರಾರು ಮಂದಿ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೀತಾರಾಮ ಬೆರಿಂಜ (ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಬಿ. ಶೇಖರ್ (ಎಐಟಿಯುಸಿ ಜಿಲ್ಲಾ ಮುಖಂಡರು), ಯೋಗಿಶ್ ಜಪ್ಪಿನಮೊಗರು (ಸಿಐಟಿಯು ಜಿಲ್ಲಾ ಮುಖಂಡರು), ಕೆ. ಯಾದವ ಶೆಟ್ಟಿ (ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರು), ಓಸ್ವಾಲ್ ಪ್ರಕಾಶ್ ಫೆರ್ನಾಂಡೀಸ್ (ರಾಜ್ಯ ರೈತ ಸಂಘದ ನಾಯಕರು), ಬಿ.ಎಂ. ಮಾಧವ (ಬ್ಯಾಂಕ್ ನೌಕರರ ಮುಖಂಡರು), ಬಿ.ಎನ್. ದೇವಾಡಿಗ (ವಿಮಾ ನೌಕರರ ಸಂಘಟನೆಯ ಮುಖಂಡರು), ರಾಜನ್ ಡಿ.ಕೋಸ್ತ (ವಿಮಾ ಪ್ರತಿನಿಧಿಗಳ ಸಂಘಟನೆಯ ಜಿಲ್ಲಾ ಮುಖಂಡರು), ಪಿ.ಹೆಚ್. ಮೋಹನ್ (ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಹೊಟೇಲ್ ಕಾರ್ಮಿಕರ ಸಂಘ), ಕಿರಣ್ ರಾಜ್( ಹೋಟೇಲ್ ಕಾರ್ಮಿಕರ ಮುಖಂಡರು) ಮುಂತಾದವರು ಉಪಸ್ಥಿತರಿದ್ದರು.

 

You may also like

News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು
News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC

You cannot copy content of this page