October 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ – ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಅಭಿಯಾನಕ್ಕೆ ಚಾಲನೆ

ಯಕ್ಷಗಾನ ಬೊಂಬೆಯಾಟ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಪರಂಪರಾ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನೂತನ ಅಭಿಯಾನ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಯನ್ನು ಧರ್ಮಸ್ಥಳ ದೇವಸ್ಥಾನದ ಮುಂಭಾಗದಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಈ ನಿಟ್ಟಿನಲ್ಲಿ ಮಾದರಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವ ಕಾಸರಗೋಡಿನ ಕೆ. ವಿ. ರಮೇಶ ಅಭಿನಂದನಾರ್ಹರು ಎಂದರು.

ಸರಳ ಮತ್ತು ಅರ್ಥಪೂರ್ಣ ಸಮಾರಂಭದಲ್ಲಿ ಡಾ. ಹೆಗ್ಗಡೆಯವರು ಧರ್ಮಪತ್ನಿ ಹೇಮಾವತಿ ವಿ. ಹೆಗ್ಗಡೆಯವರೊಂದಿಗೆ ಕುಳಿತು ‘ನರಕಾಸುರ ವಧೆ’ ಪ್ರಸಂಗದ ಯಕ್ಷಗಾನ ಬೊಂಬೆಯಾಟವನ್ನು ಸಂಪೂರ್ಣವಾಗಿ ವೀಕ್ಷಿಸಿದರು. ಈ ಸಂದರ್ಭ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ. ವಿ. ರಮೇಶ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಮಾಧ್ಯಮ ಪ್ರತಿನಿಧಿ ಅಚಲ್ ರಾವ್ ಮರ್ದಂಬೈಲ್, ಕನ್ನಡ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಸರಗೋಡು ಉಪಸ್ಥಿತರಿದ್ದರು. ಬೊಂಬೆಯಾಟ ತಂಡದ ಸೂತ್ರಧಾರಿಗಳು ಹಾಗೂ ಕಾಸರಗೋಡಿನಿಂದ ಆಗಮಿಸಿದ ಕಲಾಭಿಮಾನಿಗಳನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸ್ಮರಣಿಕೆ ನೀಡಿ ಅಭಿನಂದಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಪ್ರಧಾನ ಸಂಚಾಲಕ ಕೆ. ಜಗದೀಶ ಕೂಡ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕವಿ ಹಾಗೂ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳಿಕ ಯಕ್ಷಗಾನ ಬೊಂಬೆಯಾಟದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು. ಪ್ರಧಾನ ಸೂತ್ರಧಾರಿ ಕೆ. ವಿ. ರಮೇಶ ಅವರ ನೇತೃತ್ವದಲ್ಲಿ, ಸಹ ಸೂತ್ರಧಾರಿಗಳಾದ ತಿರುಮಲೇಶ ಕೆ. ವಿ., ಸುದರ್ಶನ ಕೆ. ವಿ., ಅನೀಶ್ ಪಿಲಿಕುಂಜೆ, ಮನೋರಮಾ ಎಡನೀರು, ಭವ್ಯಶ್ರೀ ಬಲ್ಲಾಳ್ ಅವರ ಸಮರ್ಥ ನಿರ್ವಹಣೆಯಲ್ಲಿ ಪ್ರದರ್ಶಿತವಾದ ‘ನರಕಾಸುರ ವಧೆ’ ಪ್ರಸಂಗ ಪ್ರೇಕ್ಷಕರಿಂದ ಭಾರೀ ಕರತಾಡನ ಪಡೆದಿತು.

ಪಾರ್ತಿಸುಬ್ಬನ ವಂಶಜರಿಂದ ಸ್ಥಾಪಿತಗೊಂಡು ನಾಲ್ಕೂವರೆ ದಶಕಗಳ ಇತಿಹಾಸ ಹೊಂದಿರುವ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು, ತೆಂಕುತಿಟ್ಟು ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸುವ ವಿಶ್ವದ ಏಕೈಕ ಸಂಘವಾಗಿದೆ. ‘ಚಿಣ್ಣರ ಅಂಗಳಕ್ಕೆ ಮುತ್ತಳಿ ಯಾತ್ರೆ’, ‘ಶಾಲೆಯತ್ತ ಬೊಂಬೆ ಚಿತ್ರ’ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿರುವ ಸಂಘವು, ಆಸಕ್ತ ವಿದ್ಯಾರ್ಥಿ ಹಾಗೂ ಯುವಜನರಿಗೆ ತರಬೇತಿ ನೀಡುತ್ತಾ ಈ ಅಪರೂಪದ ಕಲೆಯ ಉಳಿವಿಗೆ ಶ್ರಮಿಸುತ್ತಿದೆ. ಸುವರ್ಣ ಸಂಭ್ರಮದ ಮುಂಚಿತವಾಗಿ ಚಂದ್ರಗಿರಿ ತೀರದಲ್ಲಿರುವ ಯಕ್ಷಪುತ್ಥಳಿ ಬೊಂಬೆಮನೆಯಲ್ಲಿ ಸಾವಿರ ಯಕ್ಷಗಾನ ಸೂತ್ರದ ಬೊಂಬೆಗಳ ಮ್ಯೂಸಿಯಂ ಸ್ಥಾಪನೆಯ ಮಹತ್ವಾಕಾಂಕ್ಷಿ ಯೋಜನೆಯೂ ಅಭಿವೃದ್ಧಿಯ ಹಂತದಲ್ಲಿದೆ.

You may also like

News

ಪುತ್ತೂರು ರಸ್ತೆ ಅಪಘಾತದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಮಮತಾ ದುರ್ಮರಣ

ಪುತ್ತೂರು ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುತ್ತೂರು ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ ಮಮತಾ ಅವರು ಚಿಕಿತ್ಸೆ
News

Inauguration of RGUHS Mangaluru Zone Throwball (M&W) Tournament 2026-27 at Father Muller Homoeopathic Medical College Deralakatte

RGUHS Mangaluru Zone Throwball (M&W) Tournament 2026-27 was hosted by Father Muller Homoeopathic Medical College, Deralakatte on 17th October 2026.

You cannot copy content of this page