October 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾವಳಿ ಜನರ ದಶಕಗಳ ಕನಸು ನನಸಾಗುವತ್ತ – ಹೈಕೋರ್ಟ್ ಪೀಠ ಸ್ಥಾಪನೆಗೆ ಸಿಜೆ ವಿಭು ಭಖ್ರು ಸಕಾರಾತ್ಮಕ ಸ್ಪಂದನೆ

ಮಂಗಳೂರಿನ ಹಿರಿಯ ವಕೀಲರಾದ ಎಂ.ಪಿ. ನೊರೊನ್ಹಾ, ಎಚ್.ವಿ. ರಾಘವೇಂದ್ರ ಮತ್ತು ರಿಚರ್ಡ್ ಡಿಕೋಸ್ಟಾ ಎಂ. ನಿಯೋಗವು ಮುಖ್ಯನ್ಯಾಯಮೂರ್ತಿಗಳ ಭೇಟಿ

ಕರಾವಳಿ ಪ್ರದೇಶದಲ್ಲಿ ಕರ್ನಾಟಕ ಹೈಕೋರ್ಟ್‌ನ ಶಾಶ್ವತ ಅಥವಾ ಸಂಚಾರಿ ಪೀಠ ಸ್ಥಾಪಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಈಗ ಹೊಸ ಚೈತನ್ಯ ಬಂದಿದೆ. ಈ ಸಂಬಂಧ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ನಿಯೋಗವು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಮಾನ್ಯ ವಿಭು ಭಖ್ರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪೀಠ ಸ್ಥಾಪನೆಯ ಸಾಧ್ಯತೆಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ.

ಹಿನ್ನೆಲೆ ಮತ್ತು ಹೋರಾಟ:

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರಿಗೆ ನ್ಯಾಯಾಂಗ ಪ್ರವೇಶವನ್ನು ಸುಲಭಗೊಳಿಸಲು ಶಾಶ್ವತ ಪೀಠದ ಅಗತ್ಯವಿದೆ ಎಂದು ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರ ಸಂಚಾಲಕತ್ವದಲ್ಲಿ ಹೋರಾಟ ಸಮಿತಿ ರಚನೆಯಾಗಿತ್ತು. ಇತ್ತೀಚೆಗೆ ನಡೆದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನ್ಯಾಯದ ವಿಕೇಂದ್ರೀಕರಣದ ಕುರಿತು ನೀಡಿದ ಹೇಳಿಕೆಯು ಈ ಚಳುವಳಿಗೆ ಮತ್ತಷ್ಟು ಬಲ ತುಂಬಿದೆ.

ಗಣ್ಯರ ಭೇಟಿ ಮತ್ತು ಮಾರ್ಗದರ್ಶನ:

ಹೋರಾಟ ಸಮಿತಿಯ ಪ್ರಮುಖರಾದ ಎಂ.ಪಿ.ನೊರೊನ್ಹಾ : PRO – ಕೋಸ್ಟಲ್ ಕರ್ನಾಟಕ ಹೈಕೋರ್ಟ್ ಹೋರಾಟ ಸಮಿತಿ ಹಾಗೂ ಜಿಲ್ಲಾ ಪ್ರಧಾನ ಸರ್ಕಾರಿ ವಕೀಲರು, ಎಚ್.ವಿ. ರಾಘವೇಂದ್ರ : ಅಧ್ಯಕ್ಷರು – ಕೋಸ್ಟಲ್ ಕರ್ನಾಟಕ ಹೈಕೋರ್ಟ್ ಹೋರಾಟ ಸಮಿತಿ ಹಾಗೂ ಅಧ್ಯಕ್ಷರು ಮಂಗಳೂರು ಬಾರ್ ಅಸೋಸಿಯೇಶನ್ ಮತ್ತು   ರಿಚರ್ಡ್ ಡಿಕೋಸ್ಟಾ ಎಂ. : ಅಧ್ಯಕ್ಷರು, ಬಂಟ್ವಾಳ ಬಾರ್ ಅಸೋಸಿಯೇಶನ್ ಹಾಗೂ  ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಬಾರ್ ಅಸೋಸಿಯೇಶನ್ ಅವರನ್ನೊಳಗೊಂಡ ನಿಯೋಗವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಆಂಧ್ರ ಪ್ರದೇಶದ ರಾಜ್ಯಪಾಲರಾದ ಗೌರವಾನ್ವಿತ ಅಬ್ದುಲ್ ನಜೀರ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಅಬ್ದುಲ್ ನಜೀರ್ ಅವರು ಪೀಠ ಸ್ಥಾಪನೆಗೆ ಅಗತ್ಯವಿರುವ ಮಾರ್ಗಸೂಚಿಗಳ ಬಗ್ಗೆ ಅಮೂಲ್ಯ ಸಲಹೆ ನೀಡಿ, ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

ಸ್ಪೀಕರ್ ಯು.ಟಿ. ಖಾದರ್ ಮಧ್ಯಸ್ಥಿಕೆ:

ವಿಧಾನಸಭೆಯ ಸಭಾಪತಿಗಳಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಅವರನ್ನು ಭೇಟಿ ಮಾಡಿದ ಸಮಿತಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಅವರು ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳಿಗೆ ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಅಧಿಕೃತ ಪತ್ರ ಬರೆದಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ಭರವಸೆ:

ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ವಿಭು ಭಖ್ರು ಅವರನ್ನು ಮಾಡಿದ ಭೇಟಿ ಎಂ.ಪಿ. ನೊರೊನ್ಹಾ, ಹೆಚ್.ವಿ. ರಾಘವೇಂದ್ರ ಮತ್ತು ರಿಚ್ಚರ್ಡ್ ಡಿಕೋಸ್ಟಾ ಎಂ. ಅವರ ನಿಯೋಗವು, ಒಂದು ವಿಭಾಗೀಯ ಪೀಠ ಮತ್ತು ಎರಡು ಏಕಸದಸ್ಯ ಪೀಠಗಳನ್ನೊಳಗೊಂಡ ಸಂಚಾರಿ ಪೀಠವನ್ನು ತಕ್ಷಣವೇ ಆರಂಭಿಸುವಂತೆ ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಸಿಜೆ ಅವರು, ಈ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುವುದು ಹಾಗೂ ಅಗತ್ಯವಿದ್ದರೆ ಆಡಳಿತಾತ್ಮಕ ನ್ಯಾಯಮೂರ್ತಿಗಳನ್ನು ಕಳುಹಿಸಿ ಮೂಲಸೌಕರ್ಯದ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ನಿಯೋಗವು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್. ಟಿ. ನರೇಂದ್ರ ಪ್ರಸಾದ್ ಮತ್ತು ದಕ್ಷಿಣ ಕನ್ನಡ ಮೂಲದ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಣ ಅವರನ್ನು ಭೇಟಿ ಮಾಡಿತು. ಇಬ್ಬರೂ ನ್ಯಾಯಮೂರ್ತಿಗಳು ಪೀಠ ಸ್ಥಾಪನೆಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಹೈಕೋರ್ಟ್ ವಕೀಲರಾದ ಅಜೆಯ್ ಮೆಲ್ರಿಕ್ ನೊರೊನ್ಹಾ ಉಪಸ್ಥಿತರಿದ್ದರು. ನ್ಯಾಯಾಂಗ ವ್ಯವಸ್ಥೆಯ ಈ ಸಕಾರಾತ್ಮಕ ನಡೆಯನ್ನು ವಕೀಲರ ವಲಯ ಹಾಗೂ ಕರಾವಳಿಯ ಸಾರ್ವಜನಿಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

You may also like

News

CODP Organises October Camp in Mangaluru to Promote Children’s Holistic Development

The Child Sponsorship Programme (CSP) of the Canara Organisation for Development and Peace (CODP), Mangaluru, organised its October Camp for
News

‘ಪೊಲೀಸ್–ATS’ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ – ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ

ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಮುಂಬೈ ಪೊಲೀಸ್ ಹಾಗೂ ATS ಅಧಿಕಾರಿಗಳೆಂದು ಪರಿಚಯಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹1,31,50,000 ಹಣ ವಂಚಿಸಿರುವ ಘಟನೆ ನಡೆದಿದೆ. ಆರೋಪಿಗಳು

You cannot copy content of this page