October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ–ಸಂಪಾಜೆ ಹೆದ್ದಾರಿಗೆ ₹49.22 ಕೋಟಿ – ಚತುಷ್ಪಥ ಯೋಜನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–275ರ ಮಾಣಿ–ಸಂಪಾಜೆ ರಸ್ತೆಯ ತುರ್ತು ದುರಸ್ತಿಗೆ ಕೇಂದ್ರ ಸರ್ಕಾರ ₹49.22 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಚತುಷ್ಪಥ (4-ಲೇನ್) ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಶೀಘ್ರ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲೆಯ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಿದ ಸಂಸದರು, ಕರಾವಳಿ ಹಾಗೂ ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಾಣಿ–ಸಂಪಾಜೆ ಹೆದ್ದಾರಿಯ ಚತುಷ್ಪಥ ಯೋಜನೆಗೆ ರಸ್ತೆ ವಿನ್ಯಾಸ (Alignment) ಹಾಗೂ ಆಡಳಿತಾತ್ಮಕ ಅನುಮೋದನೆ ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಂಗಳೂರು–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಯ ಪ್ರಗತಿಯ ಬಗ್ಗೆಯೂ ಚರ್ಚೆ ನಡೆದಿದ್ದು, ಶಿರಾಡಿ ಘಾಟ್ ವಿಭಾಗದ ಹೊಸ ರಸ್ತೆ ವಿನ್ಯಾಸಕ್ಕೆ ಅನುಮೋದನೆ ದೊರೆತಿರುವುದನ್ನು ಕ್ಯಾಪ್ಟನ್ ಚೌಟ ಸ್ವಾಗತಿಸಿದರು. ಯೋಜನೆಗೆ ಸಂಬಂಧಿಸಿದ DPR ಸಿದ್ಧತೆ ಹಾಗೂ ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ಅನುಮತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವದರ್ಜೆಯ ರಸ್ತೆ ಸಂಪರ್ಕ ವ್ಯವಸ್ಥೆ ನಿರ್ಮಾಣವಾದರೆ ಹೂಡಿಕೆ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಈ ಮಹತ್ವದ ಯೋಜನೆಗಳು ಸಾಕಾರಗೊಳ್ಳುವವರೆಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಹೋರಾಟ ಮತ್ತು ಫಾಲೋಅಪ್ ಮುಂದುವರಿಸುತ್ತೇನೆ” ಎಂದು ಹೇಳಿದರು.

₹49.22 ಕೋಟಿ ಅನುದಾನದಲ್ಲಿ ಏನು ಕಾಮಗಾರಿ?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾಣಿ–ಸಂಪಾಜೆ ವಿಭಾಗದ 71.60 ಕಿ.ಮೀ. ರಸ್ತೆಯ ತುರ್ತು ದುರಸ್ತಿಗೆ ₹49.22 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ. ಈ ಅನುದಾನದಲ್ಲಿ ರಸ್ತೆ ಮರುಡಾಂಬರೀಕರಣ, ರಸ್ತೆ ಬದಿಗಳ ಅಭಿವೃದ್ಧಿ, ಸಂಚಾರ ಸೂಚಕ ಫಲಕಗಳ ಅಳವಡಿಕೆ, ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಸುರಕ್ಷತಾ ಕಾಮಗಾರಿಗಳು ಕೈಗೊಳ್ಳಲಾಗಲಿವೆ. ಆರ್ಥಿಕ ಹಾಗೂ ಟೆಂಡರ್ ಅನುಮೋದನೆ ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭವಾಗಲಿದೆ.

ಇದರ ಜೊತೆಗೆ, ಮಾಣಿ–ಸಂಪಾಜೆ ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆ ಈಗಾಗಲೇ 2026–27ರ ವಾರ್ಷಿಕ ಯೋಜನೆಗೆ ಸೇರಿಸಲಾಗಿದ್ದು, ಅದರ ವಿಸ್ತೃತ ಯೋಜನಾ ವರದಿ (DPR) ಸಿದ್ಧಗೊಳ್ಳುತ್ತಿದೆ. ರಸ್ತೆ ವಿನ್ಯಾಸಕ್ಕೆ ಶೀಘ್ರದಲ್ಲೇ ಅಂತಿಮ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.

You may also like

News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.
News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು

You cannot copy content of this page