July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ

ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭವು ಇಂದು ಜುಲಾಯ್ 11ರಂದು ಶನಿವಾರ ಬೆಳಿಗ್ಗೆ ಸಂದೇಶ ಫೌಂಡೇಶನ್ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಸ್ಥೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಡಾ. ಹೆನ್ರಿ ಡಿಸೋಜ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಆಶೀರ್ವದಿಸಿದರು. ಬಳಿಕ ರಾಮಕೃಷ್ಣ ಮಠದ ಸ್ವಾಮಿ ಯುಗಾನಂದ ಅವರು ದೀಪ ಪ್ರಜ್ವಲನೆ ನೆರವೇರಿಸಿ ಆಶೀರ್ವಚನ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಷಪ್ ಡಾ. ಹೆನ್ರಿ ಡಿಸೋಜ ಅವರು, “ನಾವು ಎಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ; ನಾವು ಯಾವ ಗುರಿ ತಲುಪುತ್ತೇವೆ, ಏನು ಸಾಧಿಸುತ್ತೇವೆ ಹಾಗೂ ಸಮಾಜಕ್ಕೆ ಹೇಗೆ ಕೊಡುಗೆ ನೀಡುತ್ತೇವೆ ಎಂಬುದೇ ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ವಾಮಿ ಯುಗಾನಂದ ಅವರು, “ಶಿಕ್ಷಣ, ವಾಣಿಜ್ಯ, ಬ್ಯಾಂಕಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ದೇಶದ ಮುಂಚೂಣಿಯಲ್ಲಿದ್ದರೂ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಕೇಂದ್ರದ ಕೊರತೆ ಇತ್ತು. ಇದೀಗ ‘Mangalore IAS’ ಆರಂಭವಾಗಿರುವುದು ಸಂತಸದ ಸಂಗತಿಯಾಗಿದ್ದು, ಇದರ ಮೂಲಕ ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ” ಎಂದು ಶುಭ ಹಾರೈಸಿದರು.

ಡೈಜಿ ವರ್ಲ್ಡ್ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಮಾತನಾಡಿ, “ತಮಗೂ ಪೊಲೀಸ್ ಇಲಾಖೆಗೆ ಸೇರುವ ಕನಸಿತ್ತು. ಆದರೆ ಅಂದು ಸೂಕ್ತ ಮಾರ್ಗದರ್ಶನ ದೊರೆಯಲಿಲ್ಲ. ಇಂದು ಇಂತಹ ತರಬೇತಿ ಸಂಸ್ಥೆಗಳು ಆರಂಭವಾಗುತ್ತಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶವಾಗಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿರುವುದು ಸಂತಸ ತಂದಿದ್ದು, ಭವಿಷ್ಯದಲ್ಲಿ ಅವರು ಅಧಿಕಾರಿಗಳಾಗಿ ಸೇವೆ ಸಲ್ಲಿಸುವುದನ್ನು ನೋಡುವ ಆಶಯ ವ್ಯಕ್ತಪಡಿಸಿದರು. ಜಿಲ್ಲೆಯ ಪ್ರತಿಭೆಗಳು ದೇಶದಾದ್ಯಂತ ಮಿಂಚಲಿ” ಎಂದು ಶುಭ ಹಾರೈಸಿದರು.

ಸಂದೇಶ ಫೌಂಡೇಶನ್ ನಿರ್ದೇಶಕರಾದ ವಂದನೀಯ ರೋಷನ್ ರೋಸಾರಿಯೊ ಸ್ವಾಗತಿಸಿದರು. Mangalore IAS ಸಂಸ್ಥೆಯ ಸಂಸ್ಥಾಪಕರಾದ ಸಂತೋಷ್ ರಾವ್ ಸಂಸ್ಥೆಯ ಉದ್ದೇಶ, ತರಬೇತಿ ವಿಧಾನ ಹಾಗೂ ವಿವಿಧ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು. ಸಂದೇಶ ಸಂಸ್ಥೆಯ ಟ್ರಸ್ಟಿ ರೋಯ್ ಕ್ಯಾಸ್ಟಲಿನೊ ವಂದಿಸಿದರು. ಜಾಸ್ಮಿನ್ ಜೇನಿಫರ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು

You cannot copy content of this page