October 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾನೀರ್ ಚರ್ಚ್‌ನಲ್ಲಿ ಆಧಾರ್ ಮತ್ತು ವಿಮೆ ಜಾಗೃತಿ ಅಭಿಯಾನ – 200ಕ್ಕೂ ಹೆಚ್ಚು ಜನರು ಪಡೆದ ಅಂಚೆ ಇಲಾಖೆ ಸೇವೆಗಳ ಲಾಭ

ಕುಟುಂಬದ ಆರ್ಥಿಕ ಭದ್ರತೆಗೆ ವಿಮೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾದ ರಕ್ಷಾಕವಚ – ಫಾದರ್ ವಿಕ್ಟರ್ ಡಿಮೆಲ್ಲೊ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾನೀರ್ ಚರ್ಚ್ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ಜಂಟಿ ಆಶ್ರಯದಲ್ಲಿ ಜುಲೈ 12ರಂದು ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆಧಾರ್ ನೋಂದಣಿ, ತಿದ್ದುಪಡಿ, ಆರೋಗ್ಯ ಹಾಗೂ ಅಪಘಾತ ವಿಮೆ ಜನಜಾಗೃತಿ ಅಭಿಯಾನವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಚರ್ಚ್ ನ ವಿವಿಧ ಆಯೋಗಗಳು ಮತ್ತು ಸಂಘಟನೆಗಳ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ 200ಕ್ಕೂ ಹೆಚ್ಚು ಫಲಾನುಭವಿಗಳು ನೇರ ಪ್ರಯೋಜನ ಪಡೆದುಕೊಂಡರು.

ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪಾನೀರ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೊ ಅವರು ಉದ್ಘಾಟಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಉರ್ಬನ್ ಫೆರಾವೊ ಅವರಿಗೆ ಆಧಾರ್ ಕಾರ್ಡ್ ಹಾಗೂ ಕಾರ್ಯದರ್ಶಿ ವಿನ್ನಿ ಕುಟಿನ್ಹಾ ಅವರಿಗೆ ಆರೋಗ್ಯ ವಿಮೆ ಪಾಲಿಸಿಯನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ವಿಮೆ ಕುಟುಂಬಕ್ಕೆ ರಕ್ಷಾಕವಚ:

ಕಾರ್ಯಕ್ರಮದಲ್ಲಿ ಮುಖ್ಯ ಮಾಹಿತಿ ನೀಡಿದ ಭಾರತೀಯ ಅಂಚೆ ಇಲಾಖೆಯ ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ. ಸಾಲ್ಯಾನ್ ಅವರು, ಸಾರ್ವಜನಿಕರಿಗೆ ಆರೋಗ್ಯ ಮತ್ತು ಅಪಘಾತ ವಿಮೆಯ ಅಗತ್ಯತೆ ಹಾಗೂ ಅದರ ವಿವಿಧ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟರು.

ಬಳಿಕ ಮಾತನಾಡಿದ ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೋ ಅವರು, “ರೋಗ ಅಥವಾ ಆಪತ್ತು ಬಂದಾಗ ಆರ್ಥಿಕವಾಗಿ ಕಂಗಾಲಾಗುವುದಕ್ಕಿಂತ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸುವುದು ಜಾಣತನ. ಆರೋಗ್ಯ ಮತ್ತು ಅಪಘಾತ ವಿಮೆಗಳನ್ನು ಮಾಡಿಸಿಕೊಳ್ಳುವುದು ಪ್ರತಿಯೊಂದು ಕುಟುಂಬದ ಆರ್ಥಿಕ ಭದ್ರತೆಗೆ ಅತ್ಯಗತ್ಯವಾದ ರಕ್ಷಾಕವಚವಾಗಿದೆ,” ಎಂದು ಕರೆ ನೀಡಿದರು.

ದಿನವಿಡೀ ನಡೆದ ಸೇವೆ:

ಬೆಳಿಗ್ಗೆ 8.30 ರಿಂದ ಸಂಜೆ 3.30 ರವರೆಗೆ ನಿರಂತರವಾಗಿ ನಡೆದ ಈ ವಿಶೇಷ ಅಭಿಯಾನದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ವಿಮೆ ಯೋಜನೆಗಳ ನೋಂದಣಿ ಮಾಡಿಸಿಕೊಂಡರು. ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರು ಹಾಗೂ ಫಲಾನುಭವಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಚರ್ಚ್ ನ ವಿವಿಧ ಆಯೋಗಗಳ ಸಂಯೋಜಕ ಆಲ್ವಿನ್ ಡಿಸೋಜ ಪಾನೀರ್ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಚರ್ಚ್ ಪಾಲನಾ ಸಮಿತಿಯ ಸದಸ್ಯ ರೊನಾಲ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ದೇರಕಟ್ಟೆಯ ಪೋಸ್ಟ್‌ಮಾಸ್ಟರ್ ಮಹೇಶ್ ಕುಮಾರ್, ಕಥೊಲಿಕ್ ಸಭಾ ಅಧ್ಯಕ್ಷ ಐವನ್ ಮೊಂತೇರೊ, ಐ.ಸಿ.ವೈ.ಎಂ. ಅಧ್ಯಕ್ಷ ಪ್ರೀತಮ್ ಡಿಸೋಜ, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಲೆತೀಷ್ಯ ರೊಡ್ರಿಗಸ್ ಸೇರಿದಂತೆ ವಿವಿಧ ಆಯೋಗಗಳ (ಆರೋಗ್ಯ, ಕಾರ್ಮಿಕ, ಕುಟುಂಬ, ಸಾಮಾಜಿಕ ಅಭಿವೃದ್ಧಿ, ಎಸ್.ವಿ.ಪಿ.) ಸಂಚಾಲಕರುಗಳಾದ ಪ್ರೆಸಿಲ್ಲಾ ಮೊಂತೇರೊ, ಗಿಲ್ಬರ್ಟ್ ಡಿಸೋಜ, ಸ್ಟ್ಯಾನಿ ರೊಡ್ರಿಗಸ್ ಮತ್ತು ಫ್ರ್ಯಾಂಕಿ ಕುಟಿನ್ಹಾ ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಶ್ರಮಿಸಿದರು.

You may also like

News

ಆಲ್ಬರ್ಟ್ ರೇಗೊ ಸಾವು ನಿಗೂಢ – ಎರಡು ತಿಂಗಳ ಬಳಿಕ ಶವ ಹೊರತೆಗೆದು FSL ಪರೀಕ್ಷೆ!

ಮಂಗಳೂರಿನಲ್ಲಿ ಅಪರೂಪದ ಪ್ರಕರಣ – ಮಗಳ ವಿರುದ್ಧ ದೂರು, ದೆರೆಬೈಲ್ ಚರ್ಚ್ ಆವರಣದ ದಫನಭೂಮಿಯಲ್ಲಿ ಪೊಲೀಸ್ ತನಿಖೆ ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು,
News

ನೈನಾಡಿನಲ್ಲಿ ಪಾದುವಾ ಕಾಲೇಜಿನ 7 ದಿನಗಳ NSS ಶಿಬಿರಕ್ಕೆ ಚಾಲನೆ

“ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ” –  ಫಾದರ್ ಅರುಣ್ ವಿಲ್ಸನ್ ಲೋಬೊ ಪಾದುವಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು

You cannot copy content of this page