July 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹಕ್ಕುಗಳ ಮೇಲಿನ ದಾಳಿಗೆ ಸಾಹಿತಿಗಳು ಧ್ವನಿಯಾಗಲಿ – ಸರ್ಕಾರಿ ಅಭಿಯೋಜಕ ಎಂ.ಪಿ. ನೊರೊನ್ಹಾ

ಜನರ ಹಕ್ಕುಗಳ ಮೇಲೆ ಪ್ರಹಾರಗಳು ನಡೆದಾಗ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಧ್ವನಿ ಎತ್ತಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಅಭಿಯೋಜಕ ಎಂ.ಪಿ. ನೊರೊನ್ಹಾ ಅಭಿಪ್ರಾಯಪಟ್ಟರು. ನಗರದ ಬಲ್ಮಠದಲ್ಲಿರುವ ಸಹೋದಯ ಸಭಾಗೃಹದಲ್ಲಿ ನಡೆದ ಅಖಿಲ ಭಾರತೀಯ ಐದನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನವನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯವು ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದೆ. ಜನರ ಮನಸ್ಸಿನ ದ್ವಂದ್ವಗಳಿಗೆ ಪರಿಹಾರ ಕಂಡುಕೊಡುವ ಹೊಸ ಚಿಂತನೆಗಳು ಸಾಹಿತ್ಯದಿಂದಲೇ ಮೂಡಿಬರಬೇಕು. ಹಕ್ಕುಗಳ ಮೇಲಿನ ದಾಳಿಗಳ ವಿರುದ್ಧ ಸಾಹಿತಿಗಳು ತಮ್ಮ ಬರಹಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಬೇಕೆಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಅರುಂಧತಿ ವಿ. ರಾವ್ ಹಾಗೂ ಗೋವಾದ ಅನ್ನಿ ಡಿ ಕೊಲ್ವಾಲೆ ಅವರಿಗೆ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಪುರಸ್ಕಾರ ಪ್ರದಾನಿಸಲಾಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ದುಬೈ ಸೇರಿದಂತೆ ವಿವಿಧ ಭಾಗಗಳಿಂದ ವಿವಿಧ ಲಿಪಿ ಹಾಗೂ ಬೋಲಿಗಳಲ್ಲಿ ಕೊಂಕಣಿ ಸಾಹಿತ್ಯ ರಚಿಸುವ ಕವಿಗಳು ಒಂದೇ ವೇದಿಕೆಯಲ್ಲಿ ಸೇರುವುದು ಕೊಂಕಣಿ ಭಾಷೆಯ ವೈವಿಧ್ಯತೆ ಮತ್ತು ಏಕತೆಯ ಸಂಕೇತವಾಗಿದೆ ಎಂದರು.

ಗೋವಾದ ಹಿರಿಯ ಕೊಂಕಣಿ ಕವಿ ಹಾಗೂ ಭಾಷಾ ತಜ್ಞ ಗೌರಿಶ್ ವರ್ಣೇಕರ್ ಕವಿಗೋಷ್ಠಿಗೆ ಚಾಲನೆ ನೀಡಿದರು. ಕಾರ್ಯಕ್ರಮವು ಸೇಂಟ್ ಆನ್ಸ್ ಫ್ರೈರಿಯ ಸುಪೀರಿಯರ್ ವಂದನೀಯ ಫಾದರ್ ಜೆರಾಲ್ಡ್ ಲೋಬೊ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವೇದಿಕೆಯಲ್ಲಿ ಪೋರ್‌ವಿಂಡ್ಸ್ ಮಾಸ್ ಕಮ್ಯುನಿಕೇಶನ್ಸ್ ಆ್ಯಂಡ್ ಸರ್ವಿಸಸ್‌ನ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಶ್ರೀನಿವಾಸ ನಾಯಕ್ ಇಂದಾಜೆ ಕವಿಗಳಿಗೆ ಸನ್ಮಾನ ಪತ್ರ ಹಾಗೂ ಪದಕಗಳನ್ನು ವಿತರಿಸಿದರು. ಯೋಗಿತಾ ವರ್ಣೇಕರ್ ಸಮಾರೋಪ ಭಾಷಣ ಮಾಡಿದರು.

ಸಮ್ಮೇಳನದ ಅಂಗವಾಗಿ ಸಂತ ಅಲೋಶಿಯಸ್ ಕಾಲೇಜು ಹಾಗೂ ಗೋವಾದ ವಿದ್ಯಾರ್ಥಿಗಳು ಮತ್ತು ಸಾಹಿತಿಗಳ ನಡುವೆ ಸಾಹಿತ್ಯದ ಉಳಿವು ಮತ್ತು ಬೆಳವಣಿಗೆ ಕುರಿತು ವಿಚಾರ ವಿನಿಮಯ ನಡೆಯಿತು. ಹಿರಿಯ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು. ರಿಯಾನಾ ಡಿಕೂನಾ ವಂದಿಸಿದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ನತಾಲಿಯಾ ಡಿಕೂನಾ ಕಾರ್ಯಕ್ರಮ ನಿರೂಪಿಸಿದರು. ಜೋನ್ ತಾವ್ರೊ, ಸ್ಟೇನಿ ತಾವ್ರೊ, ಲೊನಾ ವಾಸ್, ವಿರೊಯ್ ಡೆಸಾ ಹಾಗೂ ಹೆರಾಲ್ಡ್ ಅಲ್ಬುಕರ್ಕ್ ಸಹಕರಿಸಿದರು.

You may also like

News

ದಕ್ಷಿಣ ಕನ್ನಡ ರಸ್ತೆ ಅಪಘಾತ ತಡೆಗೆ ಹೈಟೆಕ್ ಕಣ್ಣು – ಸಂಚಾರ ನಿಯಮ ಉಲ್ಲಂಘಿಸಿದರೆ ನೇರ ಮನೆಗೆ ನೋಟೀಸ್!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಹಾಗೂ ಸಂಚಾರ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಮಹತ್ವದ
News

ಕ್ರೈಸ್ತ ಸಮುದಾಯದ ಐಕ್ಯತೆಗೆ ದಾವಣಗೆರೆ ಸಾಕ್ಷಿ – ಕರ್ನಾಟಕ ಕ್ರೈಸ್ತ ಸಂಘಟನೆಯಿಂದ ಐಕ್ಯತಾ ಕೂಟ

ಅನ್ಯಾಯದ ವಿರುದ್ಧ ಯುವಕರು ಧ್ವನಿಯೆತ್ತಲು ಸಹೋದರ ಸ್ಟ್ಯಾನಿ ಪಿಂಟೋ ಬೆಂಗಳೂರು ಕರೆ ಜಿಲ್ಲಾ ನೂತನ ಸಮಿತಿ ರಚನೆ!   ದಾವಣಗೆರೆ ಇಲ್ಲಿನ ನಗರದಲ್ಲಿ ಜುಲೈ 22ರಂದು ಬುಧವಾರ

You cannot copy content of this page