ನೂತನ ಪಾಲಿಕೆ ಆಯುಕ್ತರಿಗೆ ಕಾಂಗ್ರೆಸ್ ನಿಯೋಗದ ಮನವಿ
ನಾಗರಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ – ಅಭಿವೃದ್ಧಿಗೆ ಆದ್ಯತೆ ನೀಡುವಂತೆ MLC ಐವನ್ ಡಿಸೋಜ ಆಗ್ರಹ

ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಪೊರೇಟರ್‌ಗಳ ನಿಯೋಗವು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ, ಐಎಎಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.



ನಗರದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಎಲ್‌ಇಡಿ ಬೀದಿ ದೀಪಗಳು, ಗ್ರಾಸ್ ಕಟಿಂಗ್ ಹಾಗೂ ಕಸ ವಿಲೇವಾರಿ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳ ಕುರಿತು ನಿಯೋಗವು ಆಯುಕ್ತರ ಗಮನ ಸೆಳೆಯಿತು. ಮಹಾನಗರ ಪಾಲಿಕೆಯ ಆಡಳಿತದಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಂತೆ ಮನವಿ ಮಾಡಲಾಯಿತು. ಇತ್ತೀಚೆಗೆ ನಗರದಲ್ಲಿ ಉಂಟಾದ ನೆರೆ, ಮಳೆಹಾನಿ, ಗುಡ್ಡ ಕುಸಿತ ಹಾಗೂ ಕಂಪೌಂಡ್ ಕುಸಿತ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.


ಇದೇ ವೇಳೆ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಅಕ್ರಮಗಳು, ಜನರಲ್ ಫಂಡ್‌ನ ಬಳಕೆ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‌ಗಳಿಗೆ ಅನುದಾನ ಹಂಚಿಕೆಯಲ್ಲಿ ನಡೆದಿರುವ ತಾರತಮ್ಯದ ಬಗ್ಗೆಯೂ ಆಯುಕ್ತರ ಗಮನಕ್ಕೆ ತರಲಾಯಿತು. ನಿಯೋಗದ ಮನವಿಗಳನ್ನು ಆಲಿಸಿದ ಆಯುಕ್ತರು ರಾಹುಲ್ ರತ್ನಂ ಪಾಂಡೆ ಅವರು, ಸಮಸ್ಯೆಗಳ ಕುರಿತು ಅಗತ್ಯ ವಿವರಗಳನ್ನು ಪಡೆದುಕೊಂಡು, ಶೀಘ್ರವಾಗಿ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲೀಂ ಹಾಗೂ ಪ್ರಕಾಶ್ ಬಿ. ಸಾಲ್ಯಾನ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ ಹಾಗೂ ಜೆಸಿಂತಾ ವಿಜಯಾ ಆಲ್ಫ್ರೆಡ್, ಮಾಜಿ ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವಾ, ಅನಿಲ್ ಕುಮಾರ್, ಅಶೋಕ್ ಡಿ.ಕೆ., ನವೀನ್ ಡಿ’ಸೋಜ, ಕೇಶವ ಮರೋಳಿ, ಲ್ಯಾನ್ಸ್ಲಾಟ್ ಪಿಂಟೋ, ಜೀನತ್ ಶಮ್ಸುದ್ದೀನ್, ಶಮ್ಸುದ್ದೀನ್ ಕುದ್ರೋಳಿ, ಕವಿತಾ ವಾಸು, ಅಶ್ರಫ್ ಬಜಾಲ್, ಭಾಸ್ಕರ್ ರಾವ್, ಚೇತನ್ ಕುಮಾರ್, ಸತೀಶ್ ಪೆಂಗಲ್, ಹೇಮಂತ್ ಗರೋಡಿ ಹಾಗೂ ಕಾಂಗ್ರೆಸ್ ನಾಯಕರಾದ ಅಲಿಸ್ಟನ್ ಡಿಕುನ್ಹಾ, ಶಂಶುದ್ದೀನ್, ಅಮೃತ್ ಕದ್ರಿ ಮತ್ತು ರೂಪಾ ಚೇತನ್ ಉಪಸ್ಥಿತರಿದ್ದರು.



