August 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಚಾಮರಾಜನಗರ ಶೂಟೌಟ್‌: ‘ಹೊಸ ಚಪ್ಪಲಿ, ಚರ್ಮವಿಲ್ಲದ ಮಾಂಸ’ದ ನಿಗೂಢತೆ – SIT ತನಿಖೆಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಆಗ್ರಹ

ಮೂವರ ಸಾವಿನ ಪ್ರಕರಣದಲ್ಲಿ ಜಪ್ತಿ ವಸ್ತುಗಳೇ ಹುಟ್ಟುಹಾಕಿದ ಹಲವು ಪ್ರಶ್ನೆಗಳು – ನಿಷ್ಪಕ್ಷಪಾತ ತನಿಖೆಗೆ ಕ್ರೈಸ್ತ ಸಂಘಟನೆ ಆಗ್ರಹ

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಇದೀಗ ಘಟನಾ ಸ್ಥಳದಲ್ಲಿ ಪತ್ತೆಯಾಗಿರುವ ವಸ್ತುಗಳಿಂದ ಮತ್ತಷ್ಟು ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಹೊಸದಾಗಿ ಕಾಣುವ ಚಪ್ಪಲಿಗಳು, ಚೀಲಗಳಲ್ಲಿದ್ದ ಚರ್ಮವಿಲ್ಲದ ಮಾಂಸ ಹಾಗೂ ಇತರ ವಸ್ತುಗಳ ಕುರಿತು ಸ್ಪಷ್ಟತೆ ಅಗತ್ಯವಿದ್ದು, ಇವುಗಳ ಸುತ್ತಲಿನ ನಿಗೂಢತೆಯನ್ನು SIT ತನಿಖೆಯ ಮೂಲಕ ಬಯಲಿಗೆಳೆಯಬೇಕು ಎಂದು ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ಬೆಂಗಳೂರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕಾವೇರಿ ವನ್ಯಧಾಮದ ಹನೂರು ವಲಯದಲ್ಲಿ ಕಳ್ಳಬೇಟೆಗಾರರು ಬಂದೂಕುಗಳೊಂದಿಗೆ ಅರಣ್ಯ ಪ್ರವೇಶಿಸಿದ್ದರು. ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ಇಲಾಖೆ ಹೇಳಿದೆ.

ಆದರೆ, ಮತ್ತೊಂದೆಡೆ ಮೃತರ ಕುಟುಂಬಸ್ಥರು ಮಲಗಿದ್ದವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿರುವುದರಿಂದ ಪ್ರಕರಣದಲ್ಲಿ ಎರಡು ವಿಭಿನ್ನ ಹೇಳಿಕೆಗಳು ಎದುರಾಗಿವೆ. ಹೀಗಾಗಿ ಸತ್ಯಾಸತ್ಯತೆ ಪತ್ತೆಹಚ್ಚಲು ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಸ್ಟ್ಯಾನಿ ಪಿಂಟೋ ತಿಳಿಸಿದ್ದಾರೆ.

‘ಹೊಸ ಚಪ್ಪಲಿ’ ಏಕೆ?

ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿರುವ ಹೊಸದಾಗಿ ಕಾಣುವ ಚಪ್ಪಲಿಗಳು ಇದೀಗ ಪ್ರಕರಣದ ಪ್ರಮುಖ ಪ್ರಶ್ನೆಗಳಲ್ಲಿ ಒಂದಾಗಿದೆ. ಅರಣ್ಯಕ್ಕೆ ಬೇಟೆಯ ಉದ್ದೇಶದಿಂದ ತೆರಳಿದವರು ಇಂತಹ ಹೊಸ ಚಪ್ಪಲಿಗಳನ್ನು ಏಕೆ ತೆಗೆದುಕೊಂಡು ಹೋಗಿದ್ದರು? ಅವು ಯಾರಿಗೆ ಸೇರಿದ್ದವು? ಅವುಗಳನ್ನು ಎಷ್ಟು ಮಂದಿ ಬಳಸಿದ್ದರು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ದೊರೆಯಬೇಕು ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಎರಡು ಚೀಲಗಳಲ್ಲಿ ಪತ್ತೆಯಾಗಿದೆ ಎಂದು ತಿಳಿಸಲಾಗಿರುವ ಚರ್ಮವಿಲ್ಲದ ಮಾಂಸ ಯಾವ ಪ್ರಾಣಿಯದ್ದು, ಅದು ಎಲ್ಲಿಂದ ಬಂದಿದೆ ಮತ್ತು ಅದರೊಂದಿಗೆ ಮೃತರಿಗೆ ಏನು ಸಂಬಂಧವಿದೆ ಎಂಬುದನ್ನೂ ವೈಜ್ಞಾನಿಕ ಪರೀಕ್ಷೆಯ ಮೂಲಕ ಖಚಿತಪಡಿಸಬೇಕು ಎಂದು ಸ್ಟ್ಯಾನಿ ಪಿಂಟೋ ಒತ್ತಾಯಿಸಿದ್ದಾರೆ.

ಘಟನಾ ಸ್ಥಳದಲ್ಲಿ ಪತ್ತೆಯಾದ ಬಂದೂಕುಗಳು, ಗುಂಡುಗಳು, ಮಾಂಸ, ಚಪ್ಪಲಿಗಳು, ಟಾರ್ಚ್ ಹಾಗೂ ಇತರ ವಸ್ತುಗಳನ್ನು ಕೇವಲ ವಶಪಡಿಸಿಕೊಂಡಿರುವುದಾಗಿ ಹೇಳುವುದಷ್ಟೇ ಸಾಲದು. ಅವುಗಳ ಫೊರೆನ್ಸಿಕ್, ಬ್ಯಾಲಿಸ್ಟಿಕ್ ಹಾಗೂ ಡಿಎನ್‌ಎ ಪರೀಕ್ಷೆ ನಡೆಸಿ ಪ್ರಕರಣದ ನಿಜವಾದ ಚಿತ್ರಣವನ್ನು ಹೊರತರಬೇಕು ಎಂದು ಅವರು ತಿಳಿಸಿದ್ದಾರೆ.

ಮೂರು ಜೀವಗಳ ಸಾವಿಗೆ ಸತ್ಯವೇ ಉತ್ತರವಾಗಬೇಕು:

ಮೂವರು ಮೃತಪಟ್ಟಿರುವುದರಿಂದ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅರಣ್ಯ ಇಲಾಖೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ ಎಂಬುದೇ ಸತ್ಯವಾಗಿದ್ದರೆ ಅದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳು ತನಿಖೆಯಲ್ಲಿ ಸ್ಪಷ್ಟವಾಗಬೇಕು. ಅದೇ ವೇಳೆ ಮೃತರ ಕುಟುಂಬಸ್ಥರು ಮಾಡಿರುವ ಆರೋಪಗಳಲ್ಲಿಯೂ ಸತ್ಯಾಂಶವಿದ್ದರೆ ಅದು ಕೂಡ ಬಹಿರಂಗವಾಗಬೇಕು ಎಂದು ಸ್ಟ್ಯಾನಿ ಪಿಂಟೋ ಹೇಳಿದ್ದಾರೆ.

“ಹೊಸ ಚಪ್ಪಲಿ, ಚರ್ಮವಿಲ್ಲದ ಮಾಂಸ ಸೇರಿದಂತೆ ಘಟನಾ ಸ್ಥಳದಲ್ಲಿ ಪತ್ತೆಯಾದ ಪ್ರತಿಯೊಂದು ವಸ್ತುವೂ ತನಿಖೆಯ ಭಾಗವಾಗಬೇಕು. ಯಾವುದೇ ಪೂರ್ವನಿರ್ಧಾರಿತ ನಿಲುವಿಲ್ಲದೆ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಇಡಬೇಕು. ಮೂವರು ಜೀವ ಕಳೆದುಕೊಂಡಿರುವ ಈ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸುವುದು ಅತ್ಯಂತ ಮುಖ್ಯ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕರಣದ ಸಂಪೂರ್ಣ ಸತ್ಯ ತನಿಖಾ ವರದಿಯಿಂದ ಹೊರಬರುವವರೆಗೆ ಯಾವುದೇ ಒಂದು ವಾದವನ್ನೇ ಅಂತಿಮ ಸತ್ಯವೆಂದು ಪರಿಗಣಿಸಬಾರದು. ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ವೈಜ್ಞಾನಿಕ ತನಿಖೆಯೇ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯುವ ಮಾರ್ಗವಾಗಿದೆ ಎಂದು ಸ್ಟ್ಯಾನಿ ಪಿಂಟೋ ಅಭಿಪ್ರಾಯಪಟ್ಟಿದ್ದಾರೆ.

You may also like

News

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ – ಆರೋಪಿ ಉಮೇಶ್ ಬಂಧನ

ಅಪ್ರಾಪ್ತ ಬಾಲಕನಿಗೆ ಅನುಚಿತವಾಗಿ ವರ್ತಿಸಿ, ಬಳಿಕ ಮನೆಗೆ ತೆರಳಿ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದ ಮೇಲೆ ವಿಟ್ಲ ಪೊಲೀಸರು 53 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
News

ಅಜ್ಜಿಯ ಚಿನ್ನದ ಬಳೆ ಕಸಿದುಕೊಂಡ ಮೊಮ್ಮಗನ ಬಂಧನ

ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ವೃದ್ಧೆಯ ಕೈಯಲ್ಲಿದ್ದ ಸುಮಾರು ₹5 ಲಕ್ಷ ಮೌಲ್ಯದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು,

You cannot copy content of this page