August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು, ಭಯ ಮೂಡಿಸುವ ಸಂದೇಶ – ಫೇಸ್‌ಬುಕ್ ಖಾತೆದಾರನ ವಿರುದ್ಧ ಪ್ರಕರಣ

ಪುತ್ತೂರು ದರ್ಭೆ ಪ್ರದೇಶದಲ್ಲಿ ಆಗಸ್ಟ್ 21ರಂದು ಶುಕ್ರವಾರ ಅಂಗಡಿಯೊಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕರಲ್ಲಿ ಭಯ ಉಂಟುಮಾಡುವ ರೀತಿಯಲ್ಲಿ ಸಂದೇಶ ಪ್ರಸಾರ ಮಾಡಿ, ಬಂದ್‌ಗೆ ಕರೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ‘Sanjeeva Matandoor’ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಲಾದ ಸಂದೇಶವು ಜನರಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಹಾಗೂ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿದ್ದು, ಜನರು ಅಕ್ರಮವಾಗಿ ಗುಂಪುಗೂಡಿ ಕಾನೂನುಬಾಹಿರ ಕೃತ್ಯಗಳನ್ನು ಎಸಗಲು ದುಷ್ಪ್ರೇರಣೆ ನೀಡುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ‘Sanjeeva Matandoor’ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 102/2026, ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 353(2), 57 ಹಾಗೂ 189ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಪ್ರತಿಯೊಬ್ಬ ನಾಗರಿಕನಿಗೂ ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವ ಹಕ್ಕಿದ್ದು, ನಿಯಮಾನುಸಾರ ಪೊಲೀಸ್ ಇಲಾಖೆಯಿಂದ ಪ್ರತಿಭಟನೆಗೆ ಅನುಮತಿ ನೀಡಲಾಗುತ್ತದೆ. ಆದರೆ ಪ್ರತಿಭಟನೆಯ ದಿನಾಂಕ, ಸಮಯ ಅಥವಾ ಸ್ಥಳವನ್ನು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುವ ಅಥವಾ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟುಮಾಡುವ ಉದ್ದೇಶದಿಂದ ನಿಗದಿಪಡಿಸಿರುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಂದೇಶವನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಜನರಲ್ಲಿ ಭಯ ಅಥವಾ ಅಶಾಂತಿ ಉಂಟುಮಾಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಸಂದೇಶಗಳ ಪ್ರಸಾರದಿಂದ ದೂರವಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

You may also like

News

ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!

ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ
News

ಪೊಂಪೈ ಕಾಲೇಜು ಐಕಳದಲ್ಲಿ ಮಾದಕ ವಸ್ತು, ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ

ಯುವಜನತೆ ಜಾಗೃತರಾದರೆ ಸಮಾಜ ಸುಧಾರಣೆ ಸಾಧ್ಯ – ಗಣೇಶ್ ಕುಮಾರ್ ಪೊಂಪೈ ಕಾಲೇಜು ಐಕಳದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಾನವ ಕಳ್ಳಸಾಗಣೆ ವಿರೋಧಿ ಸಂಘ, ಮಾದಕ

You cannot copy content of this page