August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಕಂಬಳಪದವು ನಿವಾಸಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೊಳಗಾದ ಆರೋಪಿ. 2019ರ ಅಕ್ಟೋಬರ್ 8ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ತನ್ನ ಮನೆಯಲ್ಲಿ ಮೊಬೈಲ್ ನೀಡುವಂತೆ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಅವರನ್ನು ಆರೋಪಿ ಕೇಳಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದ ಸಂದರ್ಭದಲ್ಲಿ ಕೋಪಗೊಂಡ ಆರೋಪಿ ಸುತ್ತಿಗೆಯಿಂದ ಆಕೆಯ ತಲೆಗೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಫಿಯೋನಾ ಸ್ವೀಡಲ್ ಕುಟಿನ್ಹಾ ಮೃತಪಟ್ಟಿದ್ದು, ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.

ಮಗಳು ಕಾಣೆಯಾಗಿರುವ ಕುರಿತು ಮೃತಳ ತಂದೆ ಫ್ರಾನ್ಸಿಸ್ ಕುಟಿನ್ಹಾ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಕಂಬಳಪದವು ಠಾಣೆಯಲ್ಲಿ ಮೊ.ನಂ. 67/2019, ಕಲಂ 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಎಸಿಪಿ ದಕ್ಷಿಣ ಟಿ. ಕೋದಂಡ ರಾಮ್ ಅವರು ನಡೆಸಿ, ತನಿಖೆ ಪೂರ್ಣಗೊಳಿಸಿ ಕಲಂ 302 ಮತ್ತು 201 ಐಪಿಸಿ ಅಡಿಯಲ್ಲಿ 2020ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2026ರ ಆಗಸ್ಟ್ 24ರಂದು ಆರೋಪಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾಗೆ ಐಪಿಸಿ ಕಲಂ 304(II) ಅಡಿಯಲ್ಲಿ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹10,000 ದಂಡ, ಮತ್ತು ಕಲಂ 201ರ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ಹಾಗೂ ₹1,000 ದಂಡ ವಿಧಿಸಿದೆ. ಅಭಿಯೋಜನೆ ಪರವಾಗಿ ಜ್ಯೋತಿ ಪ್ರಮೋದ ನಾಯಕ್ ಅವರು ವಾದ ಮಂಡಿಸಿದ್ದರು. ಮೊಬೈಲ್ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಈ ಪ್ರಕರಣಕ್ಕೆ ಸುಮಾರು ಏಳು ವರ್ಷಗಳ ಬಳಿಕ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

You may also like

News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ
News

ಮಡಂತ್ಯಾರಿನ ಶಾನ್ವಿ ಮತ್ತು ಶ್ರೇಯಸ್‌ ಅವರಿಗೆ ‘ರಾಷ್ಟ್ರೀಯ ಪ್ರತಿಭಾ ರತ್ನ’ ಗೌರವ

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್‌ (ರಿ.), ಕರ್ನಾಟಕ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ–2026’ ಕಾರ್ಯಕ್ರಮದಲ್ಲಿ ಮಡಂತ್ಯಾರಿನ ಪ್ರತಿಭೆಗಳಾದ ಶಾನ್ವಿ ಪೂಜಾರಿ ಹಾಗೂ ಶ್ರೇಯಸ್ ಪೂಜಾರಿ ಅವರಿಗೆ

You cannot copy content of this page