ಸೆಪ್ಟೆಂಬರ್ 8ರ ಮೊಂತಿ ಫೆಸ್ಟ್‌ಗೆ ಕರಾವಳಿ-ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲು ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಆಗ್ರಹ
MLC ಐವನ್ ಡಿಸೋಜ ಅವರಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಹುದ್ದೆ ನೀಡುವಂತೆಯೂ ಮೌರಿಸ್ ಮಸ್ಕರೇನ್ಹಸ್ ಒತ್ತಾಯ

ಪುತ್ತೂರು: ಕರಾವಳಿ ಹಾಗೂ ಮಲೆನಾಡು ಭಾಗದ ಕ್ರೈಸ್ತ ಸಮುದಾಯದ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕ ಹಬ್ಬವಾದ ಮೊಂತಿ ಫೆಸ್ಟ್ (ಮಾತೆ ಮರಿಯಮ್ಮನವರ ಜನ್ಮದಿನೋತ್ಸವ) ಪ್ರಯುಕ್ತ ಸೆಪ್ಟೆಂಬರ್ 8ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸುವಂತೆ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು (ರಿ.) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಕುರಿತು ಯೂನಿಯನ್ ವತಿಯಿಂದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಲಾಗಿದೆ.

ಪ್ರಮುಖ ಕೌಟುಂಬಿಕ ಮತ್ತು ಕೃಷಿ ಹಬ್ಬ:
ಕರಾವಳಿ ಹಾಗೂ ಮಲೆನಾಡು ಭಾಗದ ಕಥೊಲಿಕ್ ಕ್ರೈಸ್ತ ಸಮುದಾಯವು ಪ್ರತಿವರ್ಷ ಸೆಪ್ಟೆಂಬರ್ 8ರಂದು ಮೊಂತಿ ಫೆಸ್ಟ್ ಅನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತದೆ. ಹೊಸ ತೆನೆಯನ್ನು ಚರ್ಚ್‌ನಲ್ಲಿ ಆಶೀರ್ವದಿಸಿ ಮನೆಗೆ ತಂದು, ಕುಟುಂಬದ ಸದಸ್ಯರೆಲ್ಲರೂ ಒಂದಾಗಿ ಸಸ್ಯಾಹಾರಿ ಭೋಜನ ಸವಿಯುವ ವಿಶಿಷ್ಟ ಸಂಪ್ರದಾಯ ಈ ಹಬ್ಬದ ವಿಶೇಷತೆಯಾಗಿದೆ.
ಈ ಹಬ್ಬವು ಧಾರ್ಮಿಕ ಆಚರಣೆಯ ಜೊತೆಗೆ ಕುಟುಂಬಗಳನ್ನು ಒಗ್ಗೂಡಿಸುವ ಹಾಗೂ ಕೃಷಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬವಾಗಿದೆ ಎಂದು ಯೂನಿಯನ್ ತಿಳಿಸಿದೆ.


ನಾಲ್ಕು ಜಿಲ್ಲೆಗಳಲ್ಲಿ ರಜೆ ಘೋಷಣೆಗೆ ಮನವಿ:
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ನೆಲೆಸಿದ್ದಾರೆ. ಕುಟುಂಬ ಸಮೇತ ಹಬ್ಬ ಆಚರಿಸಲು ಅನುಕೂಲವಾಗುವಂತೆ ಈ ನಾಲ್ಕು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 8ರಂದು ಪ್ರಾದೇಶಿಕ ಅಥವಾ ಸಾರ್ವಜನಿಕ ರಜೆ ಘೋಷಿಸಬೇಕು ಎಂದು ಯೂನಿಯನ್ ಮನವಿ ಮಾಡಿದೆ.
ಪ್ರಸ್ತುತ ಕ್ಯಾಲೆಂಡರ್‌ನಲ್ಲಿ ಕ್ರೈಸ್ತ ಸಮುದಾಯಕ್ಕೆ ಕ್ರಿಸ್‌ಮಸ್ ಹಾಗೂ ಗುಡ್‌ಫ್ರೈಡೆ ಸೇರಿದಂತೆ ಸೀಮಿತ ಸಂಖ್ಯೆಯ ಸಾರ್ವಜನಿಕ ರಜೆಗಳಿದ್ದು, ಮೊಂತಿ ಫೆಸ್ಟ್‌ನ ಮಹತ್ವವನ್ನು ಪರಿಗಣಿಸಿ ಸೆಪ್ಟೆಂಬರ್ 8ರಂದು ಸಾರ್ವಜನಿಕ ರಜೆ ಘೋಷಿಸುವುದು ನ್ಯಾಯಸಮ್ಮತವಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


MLC ಐವನ್ ಡಿಸೋಜರಿಗೆ ಮುಖ್ಯ ಸಚೇತಕ ಹುದ್ದೆ ನೀಡಲು ಆಗ್ರಹ:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರಿನ ಸ್ಥಾಪಕ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕರಾವಳಿ ಭಾಗದ ಕೊಂಕಣಿ ಭಾಷಿಕ ಕ್ರೈಸ್ತ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಹೇಳಿದರು. ಪ್ರಸ್ತುತ ವಿಧಾನ ಪರಿಷತ್ ಮುಖ್ಯ ಸಚೇತಕ ಹುದ್ದೆ ಖಾಲಿಯಿದ್ದು, ವಿಧಾನ ಪರಿಷತ್‌ನ ಏಕೈಕ ಕ್ರೈಸ್ತ ಪ್ರತಿನಿಧಿ ಹಾಗೂ ಅನುಭವಿ ರಾಜಕಾರಣಿಯಾಗಿರುವ MLC ಐವನ್ ಡಿಸೋಜ ಅವರಿಗೆ ಈ ಹುದ್ದೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಇದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಅವರ ಅನುಭವದ ಪ್ರಯೋಜನ ದೊರೆಯುವುದರ ಜೊತೆಗೆ ಕೊಂಕಣಿ ಭಾಷಿಕ ಕ್ರೈಸ್ತ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ದೊರೆಯಲಿದೆ ಎಂದು ಮೌರಿಸ್ ಮಸ್ಕರೇನ್ಹಸ್ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು (ರಿ.) ಅಧ್ಯಕ್ಷ ಜೋಕಿಂ ಲುವಿಸ್, ಉಪಾಧ್ಯಕ್ಷ ವಾಲ್ಟರ್ ಡಿಸೋಜ, ಖಜಾಂಚಿ ವಾಲ್ಟರ್ ಸಿಕ್ವೇರಾ, ಗೌರವ ಸಲಹೆಗಾರ ವಲೇರಿಯನ್ ಡಯಾಸ್ ಹಾಗೂ ಸದಸ್ಯ ಮೆಲ್ವಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.



