32 ವರ್ಷಗಳ ಜನಸೇವೆ ಸಾರ್ಥಕ – ಗ್ರೆಟ್ಟಾ ಮಸ್ಕರೇನಸ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಕಂದಾಯ ಇಲಾಖೆಯಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗ್ರಾಮ ಆಡಳಿತಾಧಿಕಾರಿ ಗ್ರೆಟ್ಟಾ ಐರಿನ್ ಮಸ್ಕರೇನಸ್ ಅವರಿಗೆ ತಾಲೂಕು ಆಡಳಿತ ಸೌಧದಲ್ಲಿ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಕಂದಾಯ ಇಲಾಖೆಯ ಸೇವೆಯು ವಿವಿಧ ಒತ್ತಡ ಮತ್ತು ಜಂಜಾಟಗಳ ನಡುವೆಯೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದ ಮಹತ್ವದ ಕರ್ತವ್ಯವಾಗಿದೆ. ನಿವೃತ್ತಿಯು ಸರ್ಕಾರಿ ನೌಕರರ ಜೀವನದ ನಿಶ್ಚಿತ ಹಂತವಾಗಿದ್ದರೂ, ಸೇವಾವಧಿಯಲ್ಲಿ ಸಲ್ಲಿಸಿದ ಪ್ರಾಮಾಣಿಕ ಜನಸೇವೆ ಸದಾ ಜನರ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.

ನಿವೃತ್ತಿಯ ಬಳಿಕವೂ ಆಶಾವಾದದೊಂದಿಗೆ ಹೊಸ ಜೀವನಶೈಲಿಯನ್ನು ಅಳವಡಿಸಿಕೊಂಡು ನೆಮ್ಮದಿ ಹಾಗೂ ಸಂತೋಷದಿಂದ ಜೀವನ ಸಾಗಿಸಲಿ ಎಂದು ಅವರು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ರೆಟ್ಟಾ ಐರಿನ್ ಮಸ್ಕರೇನಸ್ ಅವರು ತಮ್ಮ 32 ವರ್ಷಗಳ ಸೇವಾವಧಿಯಲ್ಲಿ ಎದುರಿಸಿದ ಅನುಭವಗಳು ಹಾಗೂ ಜೀವನದ ಏಳುಬೀಳುಗಳನ್ನು ಸ್ಮರಿಸಿದರು. ಸರ್ಕಾರಿ ಕೆಲಸವನ್ನು ಪ್ರೀತಿಯಿಂದ ನಿರ್ವಹಿಸಿ, ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದಾಗ ನಿವೃತ್ತಿಯ ಬಳಿಕವೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದು ತಮ್ಮ ನಂಬಿಕೆ ಎಂದು ಹೇಳಿದರು. ಸರ್ಕಾರಿ ನೌಕರರು ಪ್ರಾಮಾಣಿಕತೆ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ಗಳಾದ ನರೇಂದ್ರನಾಥ್ ಮಿತ್ತೂರು, ದಿವಾಕರ ಮುಗುಳಿಯಾ, ಶಿವಪ್ರಸಾದ್, ನವೀನ್ ಕುಮಾರ್ ಬೆಂಜನಪದವು, ಆಶಿಫ್ ಇಕ್ಬಾಲ್ ಹಾಗೂ ರಶ್ಮಿ ಕೂಡ್ಲು, ಕಂದಾಯ ನಿರೀಕ್ಷಕರಾದ ವಿಜಯ್ ಆರ್. ಮತ್ತು ಪ್ರಶಾಂತ್ ಶೆಟ್ಟಿ, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕ ಮಂಜುನಾಥ್, ಪುತ್ತೂರು ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ, ನಿವೃತ್ತ ಸರ್ಕಾರಿ ಅಧಿಕಾರಿ ಜ್ಯೂಲಿಯೆಟ್ ಫೆರ್ನಾಂಡಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗ್ರಾಮ ಆಡಳಿತಾಧಿಕಾರಿ ಕೃತಿಕಾ ದೀರಜ್ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ವಿನುತಾ ವಂದಿಸಿದರು. ಗ್ರಾಮ ಆಡಳಿತಾಧಿಕಾರಿ ವೈಶಾಲಿ ಸುದೀಶ್ ಕಾರ್ಯಕ್ರಮ ನಿರೂಪಿಸಿದರು.



