ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಶಾಂತಿಗೆ ಭಂಗ – ಮೂವರ ವಿರುದ್ಧ ಎಫ್ಐಆರ್ ದಾಖಲು
ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಗಲಾಟೆ ನಡೆಸಿ, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಘಟನೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳು ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡೂರು ಗ್ರಾಮದ ಪ್ರವೀಣ್ ಆಚಾರ್ಯ, ಕೂರ್ನಡ್ಕದ ರವೂಫ್ ಹಾಗೂ ಬೋಳ್ವಾರಿನ ಹಕೀಂ ಎನ್ನುವವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.


ಘಟನೆಯ ವಿವರ:
ಸೆಪ್ಟೆಂಬರ್ 01ರಂದು ಮಂಗಳವಾರ ಮಧ್ಯಾಹ್ನ ಪುತ್ತೂರು ಕಸಬ ಗ್ರಾಮದ ಪುತ್ತೂರು ಪ್ರೆಸ್ ಕ್ಲಬ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಗುಂಪು ಸೇರಿ ಗಲಾಟೆ ಮಾಡುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜೋನ್ಸನ್ ಡಿಸೋಜ ಅವರಿಗೆ ಮಾಹಿತಿ ಲಭಿಸಿತ್ತು.

ಮಾಹಿತಿ ಸಿಗುತ್ತಿದ್ದಂತೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ನಿರೀಕ್ಷಕರು, ಪರಸ್ಪರ ಕೈ ಕೈ ಮಿಲಾಯಿಸಿ ಗಲಾಟೆ ಮಾಡುತ್ತಿದ್ದವರನ್ನು ತಡೆಯಲು ಯತ್ನಿಸಿ, ಪರಿಸ್ಥಿತಿಯ ಬಗ್ಗೆ ತಿಳುವಳಿಕೆ ನೀಡಿದರು. ಆದರೆ, ಪೊಲೀಸರ ಸೂಚನೆಯನ್ನೂ ಲೆಕ್ಕಿಸದೆ ಅವರು ಕಲಹವನ್ನು ಮುಂದುವರಿಸಿದ್ದರೆನ್ನಲಾಗಿದೆ.

ಸಾರ್ವಜನಿಕ ಶಾಂತಿಗೆ ಭಂಗ ತಂದ ಹಿನ್ನೆಲೆಯಲ್ಲಿ, ಪ್ರವೀಣ್ ಆಚಾರ್ಯ, ರವೂಫ್ ಹಾಗೂ ಹಕೀಂ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 104/2026, ಬಿಎನ್ಎಸ್ (BNS) ಕಾಯ್ದೆಯ ಕಲಂ 194(2) ರಡಿಯಲ್ಲಿ ಪ್ರಕರಣ ಕಾಯ್ದಿರಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.




