ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು – ಅಂತರ್ರಾಜ್ಯ ಕಳ್ಳನ ಬಂಧನ
ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಭೇದಿಸಿ, ಕೇರಳ ಮೂಲದ ಅಂತರ್ರಾಜ್ಯ ಕಳ್ಳತನ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬೆಟ್ಟಂಪಾಡಿ ನಿವಾಸಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಪದಾಧಿಕಾರಿಯಾಗಿರುವ 44 ವರ್ಷ ಪ್ರಾಯದ ವಿನೋದ್ ಕುಮಾರ್ ಬಿ. ಅವರು ನೀಡಿದ ದೂರಿನಂತೆ, ಆಗಸ್ಟ್ 25ರಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿದಾಗ ದೇವಸ್ಥಾನದ ಹೊರಗೆ ಇರಿಸಲಾಗಿದ್ದ ಕಾಣಿಕೆ ಡಬ್ಬಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.


ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಗಸ್ಟ್ 24ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಕಾಣಿಕೆ ಡಬ್ಬಿಯಲ್ಲಿ ಸುಮಾರು ₹4,500 ನಗದು ಇದ್ದಿರಬಹುದಾಗಿದ್ದು, ಡಬ್ಬಿಯ ಮೌಲ್ಯ ಸುಮಾರು ₹2,500 ಎಂದು ಅಂದಾಜಿಸಲಾಗಿದೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.


ತನಿಖಾ ತಂಡವು ಕೇರಳದ ಕಿನ್ನಿಂಗಾರು, ಬದಿಯಡ್ಕ ಹಾಗೂ ಆದೂರು ಭಾಗಗಳಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕೇರಳದ ಕಾಸರಗೋಡು ಮೂಲದ 31 ಪ್ರಾಯದ ಸತೀಶ್ ಎಂಬಾತನನ್ನು ಬದಿಯಡ್ಕದಲ್ಲಿ ಬಂಧಿಸಿದೆ. ಆರೋಪಿಯಿಂದ ಕಳವು ಮಾಡಲಾಗಿದ್ದ ಕಾಣಿಕೆ ಡಬ್ಬಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಅಂದಾಜು ₹1 ಲಕ್ಷ ಮೌಲ್ಯದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಬಂಧಿತ ಆರೋಪಿಯ ವಿರುದ್ಧ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನ ಪ್ರಕರಣವೂ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ:
ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನಿರ್ದೇಶನದಂತೆ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಗುಣಪಾಲ ಜೆ. ಮತ್ತು ಪಿಎಸ್ಐ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಚ್ಸಿ 1040 ರಮೇಶ್, ಎಚ್ಸಿ 2309 ನಾಗರಾಜ್, ಪಿಸಿ 2287 ಮಂಜುನಾಥ್, ಪಿಸಿ 452 ಆಕಾಶ್ ಹಾಗೂ ಪಿಸಿ 485 ಕಾರ್ತಿಕ್ ಭಾಗವಹಿಸಿದ್ದರು. ಅಪರಾಧ ವಿಭಾಗದ ಸಿಬ್ಬಂದಿಗಳಾದ ಪಿಸಿ 2394 ಶರಣಪ್ಪ ಪಾಟೀಲ್, ಪಿಸಿ 2370 ಈರಣ್ಣ ಹಾಗೂ ಎಚ್ಜಿ 483 ಹರಿಪ್ರಸಾದ್ ಅವರು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಅವರು ತನಿಖೆ ಮತ್ತು ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡಿದರು.



