ಸೆಪ್ಟೆಂಬರ್ 19ರಂದು ಕಾಞಂಗಾಡ್ನಲ್ಲಿ ಶ್ರೀ ಅವಧೂತಾನಂದ ಸ್ವಾಮೀಜಿ ಅನುಭವ ಕಥನದ ಪುಸ್ತಕ ಬಿಡುಗಡೆ
ಕಾಸರಗೋಡು: ಕಾಞಂಗಾಡ್ನ ಹೊಸದುರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ಬೆಳಿಗ್ಗೆ 10:45ಕ್ಕೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಜೀವನ, ಅನುಭವ ಹಾಗೂ ಸೇವಾ ಕಾರ್ಯಗಳನ್ನು ಒಳಗೊಂಡ ಪುಸ್ತಕದ ಬಿಡುಗಡೆ ಸಮಾರಂಭ ನಡೆಯಲಿದೆ.

ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕೃತಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10:45ರಿಂದ ಮಧ್ಯಾಹ್ನ 1ರವರೆಗೆ ನಡೆಯುವ ಸಮಾರಂಭದಲ್ಲಿ ದೀಪ ಪ್ರಜ್ವಲನ, ವೇದಘೋಷ ಹಾಗೂ ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಇದೇ ಸಂದರ್ಭದಲ್ಲಿ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಜೀವನ ಮತ್ತು ಸಮಾಜಮುಖಿ ಕಾರ್ಯಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದರ್ಶನ ಕೂಡ ನಡೆಯಲಿದೆ.


ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದು, ಶ್ರೀ ಶಿವಲಿಂಗಪ್ಪ ಸ್ವಾಮೀಜಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸ್ವಾಮಿ ಅವಧೂತಾನಂದ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.



