32 ವರ್ಷಗಳ ಶೈಕ್ಷಣಿಕ ಸೇವೆಯ ಸಾರಥಿ ಎಂ. ಸದಾಶಿವ ಭಟ್ ನಿಧನ
ಮಾಣಿ ಕರ್ನಾಟಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ – ಅಪಾರ ಶಿಷ್ಯವೃಂದ, ಬಂಧುಬಳಗ ಅಗಲಿದ ಶಿಕ್ಷಣಪ್ರೇಮಿ

ಬಂಟ್ವಾಳ: ಮಾಣಿ ನೇರಳಕಟ್ಟೆ ಸಮೀಪದ ಗಣೇಶನಗರ ನಿವಾಸಿ ಹಾಗೂ ಮಾಣಿ ಕರ್ನಾಟಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ 75 ವರ್ಷ ಪ್ರಾಯದ ಎಂ. ಸದಾಶಿವ ಭಟ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆಪ್ಟೆಂಬರ್ 15ರಂದು ಮಂಗಳವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಸದಾಶಿವ ಭಟ್ ಅವರು ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ 32 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ದಾರಿದೀಪವಾಗಿದ್ದರು. ತಮ್ಮ ಸರಳತೆ, ಆತ್ಮೀಯತೆ ಹಾಗೂ ಉತ್ತಮ ಮಾರ್ಗದರ್ಶನದ ಮೂಲಕ ಶಿಷ್ಯವೃಂದ, ಸಹೋದ್ಯೋಗಿಗಳು ಹಾಗೂ ಊರವರ ಪ್ರೀತಿಗೆ ಪಾತ್ರರಾಗಿದ್ದರು.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಮುದ್ರಾಜೆ ಈಶ್ವರ ಭಟ್ ಮತ್ತು ಶಂಕರಿಯಮ್ಮ ದಂಪತಿಯ ಪುತ್ರರಾದ ಸದಾಶಿವ ಭಟ್ ಅವರು ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮತ್ತೂರು ಬೋರ್ಡ್ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದು, ಬಳಿಕ ಮತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಹಾಗೂ ವಿರಾಜಪೇಟೆಯಲ್ಲಿ ಬಿ.ಎಡ್. ಶಿಕ್ಷಕ ತರಬೇತಿ ಪಡೆದಿದ್ದರು.
1974ರಲ್ಲಿ ಶಿಕ್ಷಕ ವೃತ್ತಿಗೆ ಪ್ರವೇಶಿಸಿದ ಅವರು ಕೆಲಕಾಲ, ಆಳಕೆ ಹಾಗೂ ಉಜಿರೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಳಿಕ ನೀರ್ಚಾಲು ಮಹಾಜನ ಸಂಸ್ಕೃತ ಪ್ರೌಢಶಾಲೆಯಲ್ಲಿ ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, 1980ರಲ್ಲಿ ಮಾಣಿ ಕರ್ನಾಟಕ ಪ್ರೌಢಶಾಲೆಗೆ ಸ್ಥಾಪಕ ಮುಖ್ಯ ಶಿಕ್ಷಕರಾಗಿ ಸೇರ್ಪಡೆಗೊಂಡರು. ಅಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಶಾಲೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅವರು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸ್ಥಳೀಯರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಶಿಕ್ಷಣದ ಜೊತೆಗೆ ಕೃಷಿ ಹಾಗೂ ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು ಸರಳ ಹಾಗೂ ಸಂತೃಪ್ತ ಜೀವನ ನಡೆಸಿದ್ದರು.
ಮೃತರು ಪತ್ನಿ ರಾಜೇಶ್ವರಿ, ಪುತ್ರಿಯರಾದ ಆಶಾ ಹಾಗೂ ರೂಪಶ್ರೀ, ಮೊಮ್ಮಕ್ಕಳಾದ ಪವನಕೃಷ್ಣ, ಅನೀಶ ಮತ್ತು ಪ್ರಣವ ಸೇರಿದಂತೆ ಅಪಾರ ಬಂಧುಬಳಗ, ಶಿಷ್ಯವೃಂದ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

ತೀವ್ರ ಸಂತಾಪ
ಸದಾಶಿವ ಭಟ್ ಅವರ ನಿಧನಕ್ಕೆ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ಹಾಗೂ ಇಬ್ರಾಹಿಂ ಕೆ. ಮಾಣಿ, ಮಾಜಿ ಉಪಾಧ್ಯಕ್ಷೆ ಪ್ರೀತಾ ಡಿನ್ನಾ ಪಿರೇರಾ, ಸದಸ್ಯರಾದ ನಾರಾಯಣ ಶೆಟ್ಟಿ, ರಮಣಿ, ಸೀತಾ, ಮಿತ್ರಾಕ್ಷಿ, ಸೂರಿಕುಮೇರು ಚರ್ಚ್ ನ ಮಾಜಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಎಲಿಯಾಸ್ ಪಿರೇರಾ, ರೋಷನ್ ಬೊನಿಫಾಸ್ ಮಾರ್ಟಿಸ್ ಹಾಗೂ ಮಾಜಿ ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಚಲನಚಿತ್ರ ನಟ ಚೇತನ್ ರೈ ಮಾಣಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.



