October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

NITK ಯಲ್ಲಿ 3 ಕೋಟಿ ಲೀಟರ್ ಮಳೆನೀರು ಸಂಗ್ರಹಕ್ಕೆ ಚಾಲನೆ

ಬೇಸಿಗೆ ನೀರಿನ ಕೊರತೆಗೆ ಪರಿಹಾರದ ಹೆಜ್ಜೆ – 1 MLD ಶುದ್ಧೀಕರಣ ಘಟಕದೊಂದಿಗೆ ಕ್ಯಾಂಪಸ್ ಜಲಜಾಲಕ್ಕೆ ಸಂಪರ್ಕ

ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK), ಸುರತ್ಕಲ್‌ನಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ಜಲಾಶಯವನ್ನು 1 MLD ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕಿಸುವ ‘ಎನ್‌ಐಟಿಕೆರೆ’ ಯೋಜನೆ ಕಾರ್ಯಾರಂಭಗೊಂಡಿದೆ.

ಜಲಾಶಯದಿಂದ ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಲು 850 ಮೀಟರ್ ಉದ್ದದ ಭೂಗತ ಪೈಪ್‌ಲೈನ್ ಹಾಗೂ ತೇಲುವ ಪಂಪಿಂಗ್ ಕೇಂದ್ರವನ್ನು ನಿರ್ಮಿಸಲಾಗಿದ್ದು, ಶುದ್ಧೀಕರಿಸಿದ ನೀರನ್ನು ಕ್ಯಾಂಪಸ್‌ನ ನೀರು ಸರಬರಾಜು ಜಾಲಕ್ಕೆ ಸಂಪರ್ಕಿಸಲಾಗಿದೆ. ಈ ಮೂಲಕ ಮಳೆನೀರಿನ ಸಮರ್ಪಕ ಬಳಕೆ ಹಾಗೂ ಬೇಸಿಗೆಯಲ್ಲಿ ಎದುರಾಗುವ ನೀರಿನ ಕೊರತೆಯನ್ನು ತಗ್ಗಿಸುವ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

 

NITK ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಂ. ಮುರುಗಪ್ಪನ್ ಹಾಗೂ ನಿರ್ದೇಶಕ ಪ್ರೊ. ಬಿ. ರವಿ ಅವರು ಸೌಲಭ್ಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ, ಎನ್‌ಐಟಿಕೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿರಂಜನ್ ಮಹಾಬಳಪ್ಪ, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

110 ಮೀಟರ್ ಉದ್ದ, 50 ಮೀಟರ್ ಅಗಲದ ಜಲಾಶಯ:

ಕ್ಯಾಂಪಸ್‌ನ ಈಶಾನ್ಯ ಭಾಗದಲ್ಲಿರುವ ತಗ್ಗು ಪ್ರದೇಶದಲ್ಲಿ 110 ಮೀಟರ್ ಉದ್ದ, 50 ಮೀಟರ್ ಅಗಲ ಹಾಗೂ ಸುಮಾರು 5 ಮೀಟರ್ ಆಳದಲ್ಲಿ 2025ರಲ್ಲಿ ಮಳೆನೀರು ಸಂಗ್ರಹ ಜಲಾಶಯ ನಿರ್ಮಿಸಲಾಯಿತು. 1974, 1983 ಹಾಗೂ 1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಈ ಕಾಮಗಾರಿಗೆ ಬೆಂಬಲ ನೀಡಿದೆ.

2026ರ ಫೆಬ್ರವರಿಯಲ್ಲಿ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್ ಸಹಕಾರದಿಂದ ಪ್ರತಿದಿನ 10 ಲಕ್ಷ ಲೀಟರ್ ನೀರು ಶುದ್ಧೀಕರಿಸುವ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲಾಯಿತು. ಜಲಾಶಯದಿಂದ ಶುದ್ಧೀಕರಣ ಘಟಕದವರೆಗೆ ತೇಲುವ ಪಂಪಿಂಗ್ ಕೇಂದ್ರ ಹಾಗೂ 850 ಮೀಟರ್ ಉದ್ದದ ಪೈಪ್‌ಲೈನ್ ನಿರ್ಮಾಣಕ್ಕೆ ಫಿನ್ನೋವೇಷನ್ ಟೆಕ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಹಕಾರ ನೀಡಿದೆ.

ತೇಲುವ ಪಂಪಿಂಗ್ ಕೇಂದ್ರವನ್ನು ಎಫ್‌ಆರ್‌ಪಿ ತೇಲುವ ತಟ್ಟೆಗಳ ಮೇಲೆ ಅಳವಡಿಸಲಾಗಿದ್ದು, ಜಲಾಶಯದ ಜಿಯೋಮೆಂಬ್ರೇನ್ ಅಸ್ತರಕ್ಕೆ ಯಾವುದೇ ಹಾನಿಯಾಗದಂತೆ ನೀರು ಸಂಗ್ರಹಿಸುವ ವ್ಯವಸ್ಥೆ ರೂಪಿಸಲಾಗಿದೆ. ಗಂಟೆಗೆ 25,200 ಲೀಟರ್ ನೀರನ್ನು ಪಂಪ್ ಮಾಡುವ ಸಾಮರ್ಥ್ಯದ ಎರಡು 15 ಎಚ್‌ಪಿ ಸಬ್‌ಮರ್ಸಿಬಲ್ ಪಂಪ್‌ಗಳನ್ನು ಅಳವಡಿಸಲಾಗಿದೆ. ಒಂದು ಪಂಪ್ ಕಾರ್ಯಾಚರಣೆಗೆ ಹಾಗೂ ಮತ್ತೊಂದು ಮೀಸಲು ಬಳಕೆಗೆ ಇರಲಿದೆ.

ಬೇಸಿಗೆ ನೀರಿನ ಸಮಸ್ಯೆಗೆ ಪರಿಹಾರದ ನಿರೀಕ್ಷೆ:

ಬೇಸಿಗೆಯಲ್ಲಿ ಕ್ಯಾಂಪಸ್‌ನಲ್ಲಿ ಎದುರಾಗುತ್ತಿದ್ದ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಹಿಂದೆ ನೀರಿನ ಅಭಾವದಿಂದ ಕ್ಯಾಂಪಸ್‌ನ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿದ ಸಂದರ್ಭಗಳಿದ್ದವು. ಮಳೆನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ಕ್ಯಾಂಪಸ್‌ನ ಜಲಜಾಲಕ್ಕೆ ಪೂರೈಸುವ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಬೇಸಿಗೆ ನೀರಿನ ಸಮಸ್ಯೆಯನ್ನು ತಗ್ಗಿಸಲು ನೆರವಾಗಲಿದೆ.

ಯೋಜನೆಯ ವಿವಿಧ ಹಂತಗಳ ಅನುಷ್ಠಾನವನ್ನು ಹಳೆ ವಿದ್ಯಾರ್ಥಿಗಳು ಸ್ವತಃ ಮೇಲ್ವಿಚಾರಣೆ ಮಾಡಿದ್ದಾರೆ. ಮಳೆನೀರು ಸಂರಕ್ಷಣೆ, ಮರುಬಳಕೆ ಹಾಗೂ ಸುಸ್ಥಿರ ಜಲ ನಿರ್ವಹಣೆಗೆ ಈ ಯೋಜನೆ ಒತ್ತು ನೀಡಿದೆ. ಎನ್‌ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಂ. ಮುರುಗಪ್ಪನ್ ಅವರು ಯೋಜನೆಗೆ ಸಹಕರಿಸಿದ ಹಳೆ ವಿದ್ಯಾರ್ಥಿಗಳು, ತಜ್ಞರು, ವಿವಿಧ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕೊಡುಗೆಯನ್ನು ಶ್ಲಾಘಿಸಿದರು.

“ಸ್ಥಳೀಯ ಸಮಸ್ಯೆಗಳಿಗೆ ಸಮೂಹಿಕ ಸಂಕಲ್ಪ ಮತ್ತು ಸಹಭಾಗಿತ್ವದ ಮೂಲಕ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ‘ಎನ್‌ಐಟಿಕೆರೆ’ ಉತ್ತಮ ಉದಾಹರಣೆಯಾಗಿದೆ. ಮಳೆಗಾಲದಲ್ಲಿ ಉತ್ತಮ ಮಳೆಯಾದರೂ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುವ ಪ್ರದೇಶಗಳಿಗೆ ಈ ತಂತ್ರಜ್ಞಾನ ಹಾಗೂ ಅನುಷ್ಠಾನ ಮಾದರಿ ಮಾರ್ಗದರ್ಶಿಯಾಗಬಹುದು,” ಎಂದು ಅವರು ಹೇಳಿದರು.

You may also like

News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the
News

ಆಲ್ಬರ್ಟ್ ರೇಗೊ ಸಾವು ನಿಗೂಢ – ಎರಡು ತಿಂಗಳ ಬಳಿಕ ಶವ ಹೊರತೆಗೆದು FSL ಪರೀಕ್ಷೆ!

ಮಂಗಳೂರಿನಲ್ಲಿ ಅಪರೂಪದ ಪ್ರಕರಣ – ಮಗಳ ವಿರುದ್ಧ ದೂರು, ದೆರೆಬೈಲ್ ಚರ್ಚ್ ಆವರಣದ ದಫನಭೂಮಿಯಲ್ಲಿ ಪೊಲೀಸ್ ತನಿಖೆ ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು,

You cannot copy content of this page