ಕೊಲೆ ಆರೋಪದ ಸುಳ್ಳು ಪ್ರಕರಣ ದಾಖಲಿಸಿ ಹಣ ಮತ್ತು ಆಸ್ತಿ ಸುಲಿಗೆಗೆ ಸಂಚು – ನವೀನ್ ತೊರಾಸ್ ಬಂಧನ
ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ, ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ 42 ವರ್ಷ ಪ್ರಾಯದ ನವೀನ್ ತೊರಾಸ್ ಎಂಬಾತನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.


ಮಾಯ ಅನ್ನಾಮೇರಿ ರೇಗೋ ಅವರು ನೀಡಿದ ದೂರಿನಂತೆ, ತಮ್ಮ ಮೇಲೆ ಕೊಲೆಯಂತಹ ಗಂಭೀರ ಸುಳ್ಳು ಆರೋಪ ಹೊರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, 2026ರ ಆಗಸ್ಟ್ 10ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 61(a)(1) ಮತ್ತು 308(7) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಕ್ಟೋಬರ್ 23ರಂದು ಮಂಗಳೂರಿನ, ಗಾನಮಜಲ್, ಪದವು, ಶಕ್ತಿನಗರ ನಿವಾಸಿ ನವೀನ್ ತೊರಾಸ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಅಕ್ಟೋಬರ್ 24ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಇದರಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಕುರಿತು ಕೂಲಂಕುಶ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



