October 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳವು ಜಾಲ ಪತ್ತೆ: 7 ಮಂದಿ ವಶಕ್ಕೆ – ₹4.50 ಲಕ್ಷ ಮೌಲ್ಯದ 9 ಬೈಕ್‌ಗಳ ಜಪ್ತಿ

ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ನೇತೃತ್ವದಲ್ಲಿ ಕಾರ್ಯಾಚರಣೆ

ಮಂಗಳೂರು ನಗರದಲ್ಲಿ ಸರಣಿ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚಿರುವ ಮಂಗಳೂರು ನಗರ ಪೊಲೀಸರು, ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ವಾಹನಗಳು ಸೇರಿದಂತೆ ಒಟ್ಟು ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ಸುಮಾರು 4.50 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು.

ವೆಲೆನ್ಸಿಯಾ ಜಂಕ್ಷನ್‌ನ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ ಅಕ್ಟೋಬರ್ 12ರಂದು ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್, ಜಪ್ಪು ಮಾರ್ಕೆಟ್ ಬಳಿ ಅಕ್ಟೋಬರ್ 19ರಂದು ನಿಲ್ಲಿಸಿದ್ದ ಯಮಹಾ ಎಫ್‌ಝಡ್ ಬೈಕ್, ಅತ್ತಾವರದ ಕೆಎಂಸಿ ಆಸ್ಪತ್ರೆ ಸಮೀಪದ ದುರ್ಗಾ ಹೋಟೆಲ್ ಮುಂದೆ ಅಕ್ಟೋಬರ್ 21ರಂದು ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಹೊಯಿಗೆ ಬಜಾರ್‌ನ ಭಗವತಿ ಅಪಾರ್ಟ್‌ಮೆಂಟ್ ಕೆಳಗೆ ಅಕ್ಟೋಬರ್ 22ರಂದು ನಿಲ್ಲಿಸಿದ್ದ ಮತ್ತೊಂದು ಕೆಟಿಎಂ ಡ್ಯೂಕ್ ಬೈಕ್ ಕಳವಾಗಿದ್ದವು.

ಇದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಬಳಿ ಅಕ್ಟೋಬರ್ 18ರಂದು ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾಗೂ ಕುತ್ತಾರ್‌ನ ಪಂಡಿತ್ ಹೌಸ್ ಬಳಿ ಅಕ್ಟೋಬರ್ 21ರಂದು ನಿಲ್ಲಿಸಿದ್ದ ಯಮಹಾ ಎಫ್‌ಝಡ್ ಬೈಕ್ ಕಳವಾಗಿದ್ದವು.

ಪ್ರಕರಣಗಳ ತನಿಖೆ ನಡೆಸಿದ ವಿಶೇಷ ತಂಡವು ಮಾಹಿತಿ ಸಂಗ್ರಹಿಸಿ, ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಲೆಬಾಳುವ ಬೈಕ್‌ಗಳೇ ಟಾರ್ಗೆಟ್!

ಪೊಲೀಸರ ವಿಚಾರಣೆ ವೇಳೆ, ಆರೋಪಿಗಳು ಬೆಲೆಬಾಳುವ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು, ಅವುಗಳನ್ನು ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕಳವು ಹಾಗೂ ಸರಗಳ್ಳತನದಂತಹ ಇತರ ಅಪರಾಧ ಕೃತ್ಯಗಳಿಂದ ಹಣ ಗಳಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ನಾಲ್ವರು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ತಂಡದ ಕಾರ್ಯಾಚರಣೆ:

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ಪಿಎಸ್‌ಐ ಮಾರುತಿ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ ಮತ್ತು ಆಂಜನೇಯ ಕೆ.ಎಸ್. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಠಾಣೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

You may also like

News

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಪತ್ನಿ ಉಷಾಕುಮಾರಿ ನಿಧನ

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಪತ್ನಿ 56 ವರ್ಷ ಪ್ರಾಯದ ಉಷಾಕುಮಾರಿ ಅವರು ಅಸೌಖ್ಯದಿಂದ ಇಂದು ಅಕ್ಟೋಬರ್ 24ರಂದು ಶನಿವಾರ ನಗರದ
News

ಕೊಲೆ ಆರೋಪದ ಸುಳ್ಳು ಪ್ರಕರಣ ದಾಖಲಿಸಿ ಹಣ ಮತ್ತು ಆಸ್ತಿ ಸುಲಿಗೆಗೆ ಸಂಚು – ನವೀನ್ ತೊರಾಸ್ ಬಂಧನ

ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ, ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ

You cannot copy content of this page