ಸಾಕು ನಾಯಿ ಮಾಲೀಕರೇ ಎಚ್ಚರ! ನಿಯಮ ಉಲ್ಲಂಘಿಸಿದರೆ ₹50 ಸಾವಿರ ದಂಡ ಹಾಗೂ ಕಾನೂನು ಕ್ರಮದ ಎಚ್ಚರಿಕೆ
ಸಾಕು ನಾಯಿಗಳನ್ನು ಸಾಕುವ ಮಾಲೀಕರು ಇನ್ನು ಮುಂದೆ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕು. ನಾಯಿಗಳಿಗೆ ಕಡ್ಡಾಯ ಲಸಿಕೆ ಹಾಕಿಸುವುದರಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವವರೆಗೆ ಹಲವು ನಿಯಮಗಳನ್ನು ಪಾಲಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶಗಳು, ಪ್ರಾಣಿ ಜನನ ನಿಯಂತ್ರಣ ನಿಯಮಗಳು–2023, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960 ಹಾಗೂ ಇತರ ಸಂಬಂಧಿತ ಕಾನೂನುಗಳನ್ವಯ ಈ ಸೂಚನೆಗಳನ್ನು ಹೊರಡಿಸಲಾಗಿದೆ.

ನಾಯಿಗಳಿಗೆ ಲಸಿಕೆ ಕಡ್ಡಾಯ:
ಎಲ್ಲಾ ಸಾಕು ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆ ಸೇರಿದಂತೆ ಪಶುವೈದ್ಯರು ಶಿಫಾರಸು ಮಾಡುವ ಲಸಿಕೆಗಳನ್ನು ಹಾಕಿಸಬೇಕು. ಅಗತ್ಯವಿರುವಂತೆ ಬೂಸ್ಟರ್ ಡೋಸ್ ನೀಡಬೇಕು. ಪಾಲಿಕೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಲಸಿಕೆ ಹಾಕಿಸಿರುವುದಕ್ಕೆ ಸಂಬಂಧಿಸಿದ ಮಾನ್ಯ ಪ್ರಮಾಣಪತ್ರವನ್ನು ಮಾಲೀಕರು ಹಾಜರುಪಡಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಬಾರು ಬಳಸಲೇಬೇಕು:
ಸಾಕು ನಾಯಿಗಳಿಗೆ ಪೌಷ್ಟಿಕ ಆಹಾರ, ಶುದ್ಧ ನೀರು, ಸುರಕ್ಷಿತ ಆಶ್ರಯ ಮತ್ತು ಸೂಕ್ತ ಪಶುವೈದ್ಯಕೀಯ ಚಿಕಿತ್ಸೆ ಒದಗಿಸುವುದು ಮಾಲೀಕರ ಜವಾಬ್ದಾರಿಯಾಗಿದೆ. ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಬಿಡುವಂತಿಲ್ಲ. ಹೊರಗೆ ಕರೆದೊಯ್ಯುವಾಗ ಬಾರು (Leash) ಬಳಸುವುದು ಕಡ್ಡಾಯ.
ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಲವಿಸರ್ಜನೆ ಮಾಡಿದರೆ, ಮಾಲೀಕರೇ ತಕ್ಷಣ ಸ್ವಚ್ಛಗೊಳಿಸಬೇಕು. ತಪ್ಪಿದಲ್ಲಿ ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳಡಿ ₹1,000ರಿಂದ ₹5,000ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಪಾಲಿಕೆ ತಿಳಿಸಿದೆ.

ಸಂತಾನಹರಣ ಮತ್ತು ನೋಂದಣಿಗೆ ಒತ್ತು:
ಸಂಬಂಧಿತ ನಿಯಮಗಳ ವ್ಯಾಪ್ತಿಗೆ ಒಳಪಡುವ ಸಾಕು ನಾಯಿಗಳಿಗೆ ಅಧಿಕೃತ ಪಶುವೈದ್ಯರ ಮೂಲಕ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಶ್ವಾನಗಳ ಸಂತಾನೋತ್ಪತ್ತಿ ಅಥವಾ ಮರಿಗಳ ಮಾರಾಟದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅನ್ವಯಿಸುವ ನಿಯಮಗಳ ಪ್ರಕಾರ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.
ನೋಂದಣಿ ಇಲ್ಲದೆ ಶ್ವಾನ ಸಂತಾನೋತ್ಪತ್ತಿ ಮತ್ತು ಮಾರಾಟ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಸೂಚಿಸಿದೆ. ಮಾರಾಟವಾಗದ ಮರಿಗಳಿಗೆ ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳ ಮೂಲಕ ಪುನರ್ವಸತಿ ಕಲ್ಪಿಸಬೇಕು.

ನಾಯಿಗಳನ್ನು ಬೀದಿಗೆ ಬಿಡುವವರಿಗೆ ಕಾನೂನು ಕ್ರಮ
ಸಾಕು ನಾಯಿಗಳನ್ನು ಅಥವಾ ಅವುಗಳ ಮರಿಗಳನ್ನು ರಸ್ತೆ, ಖಾಲಿ ನಿವೇಶನ, ಕಸದ ರಾಶಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸುವುದು ಕಾನೂನುಬಾಹಿರ. ಇಂತಹ ಪ್ರಕರಣಗಳಲ್ಲಿ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ದಂಡ ಹಾಗೂ ಇತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಣಿಗಳಿಗೆ ಹಾನಿ ಉಂಟಾದರೆ ಅಥವಾ ನಿರ್ಲಕ್ಷ್ಯದಿಂದ ಮಾನವ ಜೀವಕ್ಕೆ ಅಪಾಯ ಎದುರಾದರೆ ಸಂಬಂಧಿತ ಕಾನೂನುಗಳ ಪ್ರಕಾರ ಕ್ರಮ ಜರುಗಿಸಲಾಗುತ್ತದೆ.
ನಿಯಮ ಉಲ್ಲಂಘನೆ ಮತ್ತು ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸುವ ಪ್ರಕರಣಗಳಲ್ಲಿ ₹50,000ವರೆಗೆ ದಂಡ ವಿಧಿಸುವುದಾಗಿ ಪಾಲಿಕೆ ಎಚ್ಚರಿಸಿದೆ. ತ್ಯಜಿಸಲಾದ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆಗೆ ತಗಲುವ ವೆಚ್ಚವನ್ನು ಕಾನೂನುಬದ್ಧವಾಗಿ ಮಾಲೀಕರಿಂದ ವಸೂಲಿ ಮಾಡುವುದರ ಜೊತೆಗೆ, ಸೂಕ್ತ ಸಾಕ್ಷ್ಯಾಧಾರಗಳಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಸಾರ್ವಜನಿಕರಿಗೆ ದೂರು ನೀಡಲು ಮನವಿ:
ಸಾಕು ನಾಯಿಗಳನ್ನು ಅಥವಾ ಅವುಗಳ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ತ್ಯಜಿಸುವುದು ಕಂಡುಬಂದರೆ, ಸಾರ್ವಜನಿಕರು ಫೋಟೋ ಅಥವಾ ವಿಡಿಯೋ ಸಾಕ್ಷ್ಯಗಳೊಂದಿಗೆ ಮಂಗಳೂರು ಮಹಾನಗರಪಾಲಿಕೆಯ ಸಹಾಯವಾಣಿ 9449007722ಕ್ಕೆ ಮಾಹಿತಿ ನೀಡಬಹುದು. ಸಾರ್ವಜನಿಕ ದೂರುಗಳಿಗಾಗಿ ರಾಜ್ಯದ ಸಹಾಯವಾಣಿ 1902ನ್ನೂ ಬಳಸಬಹುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಕು ಪ್ರಾಣಿಗಳ ಆರೈಕೆ ಮಾಲೀಕರ ಜವಾಬ್ದಾರಿ. ನಿಯಮ ಪಾಲನೆಯ ಮೂಲಕ ಪ್ರಾಣಿಗಳ ಸುರಕ್ಷತೆ, ಸಾರ್ವಜನಿಕ ಸ್ವಚ್ಛತೆ ಮತ್ತು ನಾಗರಿಕರ ಹಿತವನ್ನು ಕಾಪಾಡಲು ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.




