ಕೇವಲ ₹200ರ ಕೂಪನ್‌ಗೆ ₹50 ಲಕ್ಷದ ಫಾರ್ಚುನರ್ ಕಾರು – ಆರು ವರ್ಷದ ಬಾಲಕನಿಗೆ ಅದೃಷ್ಟದ ಜಾಕ್‌ಪಾಟ್!
ಮಧ್ಯಪ್ರದೇಶದ ಸೀಲಂಪುರದಲ್ಲಿ ಆರು ವರ್ಷದ ಬಾಲಕನೊಬ್ಬ ಕೇವಲ ₹200 ಮೌಲ್ಯದ ಲಕ್ಕಿ ಡ್ರಾ ಕೂಪನ್ ಮೂಲಕ ಬರೋಬ್ಬರಿ ₹50 ಲಕ್ಷ ಮೌಲ್ಯದ ಟೊಯೊಟಾ ಫಾರ್ಚುನರ್ ಕಾರನ್ನು ಗೆದ್ದಿರುವ ಘಟನೆ ಎಲ್ಲರ ಗಮನ ಸೆಳೆದಿದೆ.
ಅದೃಷ್ಟ ಯಾವಾಗ, ಹೇಗೆ ಕೈಹಿಡಿಯುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಗರ್ಬಾ ಕಾರ್ಯಕ್ರಮವೊಂದರಲ್ಲಿ ಬಾಲಕನ ಅಜ್ಜಿ ಖರೀದಿಸಿದ ಲಕ್ಕಿ ಡ್ರಾ ಕೂಪನ್ ಮೊಮ್ಮಗನ ಹೆಸರಿನಲ್ಲಿ ನೋಂದಣಿಯಾಗಿದ್ದು, ಅದೇ ಕೂಪನ್ ಕುಟುಂಬಕ್ಕೆ ಭರ್ಜರಿ ಬಹುಮಾನ ತಂದುಕೊಟ್ಟಿದೆ.

ಅಜ್ಜಿ ಖರೀದಿಸಿದ ಕೂಪನ್‌ಗೆ ಮೊಮ್ಮಗನಿಗೆ ಬಹುಮಾನ! :
ಸೀಲಂಪುರ ನಿವಾಸಿ ಮೆದಾಂಶ್ ರೈಕ್ವಾರ್ ಎಂಬ ಆರು ವರ್ಷದ ಬಾಲಕನ ಅಜ್ಜಿ ಕಿರಣ್ ರೈಕ್ವಾರ್ ಅವರು ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ₹200 ನೀಡಿ ಲಕ್ಕಿ ಡ್ರಾ ಕೂಪನ್ ಖರೀದಿಸಿದ್ದರು. ಅದನ್ನು ಮೊಮ್ಮಗನ ಹೆಸರಿನಲ್ಲಿ ನೋಂದಾಯಿಸಿದ್ದರು. 2026ರಲ್ಲಿ ನಡೆದ ಲಕ್ಕಿ ಡ್ರಾ ಫಲಿತಾಂಶ ಪ್ರಕಟವಾದಾಗ, ಮೆದಾಂಶ್‌ಗೆ ಮೊದಲ ಬಹುಮಾನವಾಗಿ ₹50 ಲಕ್ಷ ಮೌಲ್ಯದ ಟೊಯೊಟಾ ಫಾರ್ಚುನರ್ ಕಾರು ಲಭಿಸಿದೆ ಎಂದು ವರದಿಯಾಗಿದೆ.

ಎರಡು ವರ್ಷಗಳ ಕನಸು ನನಸು!:
ಕುಟುಂಬವು ಕಳೆದ ಎರಡು ವರ್ಷಗಳಿಂದ ಸ್ವಂತ ಕಾರು ಖರೀದಿಸುವ ಕನಸು ಕಾಣುತ್ತಿತ್ತು ಎನ್ನಲಾಗಿದೆ. ಇದೀಗ ಲಕ್ಕಿ ಡ್ರಾದಲ್ಲಿ ದುಬಾರಿ ಕಾರು ಬಹುಮಾನವಾಗಿ ದೊರೆತಿರುವುದು ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದೆ. ಹೊಸ ಕಾರನ್ನು ಮನೆಗೆ ಬರಮಾಡಿಕೊಂಡ ಕುಟುಂಬಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್:
ಕೇವಲ ₹200 ಹೂಡಿಕೆಗೆ ₹50 ಲಕ್ಷದ ಕಾರು ಒಲಿದಿರುವ ಈ ಬಾಲಕನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಅಜ್ಜಿ ಖರೀದಿಸಿದ ಒಂದು ಕೂಪನ್ ಮೊಮ್ಮಗನ ಹೆಸರಿನಲ್ಲಿ ಅದೃಷ್ಟದ ಬಾಗಿಲು ತೆರೆದಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.




