12 ದಿನ, 12 ಗಂಟೆ, 12 ನಿಮಿಷಗಳ ನಿರಂತರ ಸಮೂಹ ಗಾಯನ – ಗಿನ್ನೆಸ್ ವಿಶ್ವ ದಾಖಲೆಗೆ ಮಂಗಳೂರಿನ ಮಾಂಡ್ ಸೊಭಾಣ್ ಸಜ್ಜು!
ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಮಹಾ ಸಮ್ಮೇಳನ – ಅಧ್ಯಕ್ಷ ಲುವಿ ಜೆ. ಪಿಂಟೊ

ಕೊಂಕಣಿ ಭಾಷೆ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ, ಮಂಗಳೂರಿನ ಮಾಂಡ್ ಸೊಭಾಣ್ ಸಂಘಟನೆಯ 40ನೇ ವರ್ಷಾಚರಣೆಯ ಮಾಣಿಕ್ಯೋತ್ಸವದ ಅಂಗವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು 2026 ನವೆಂಬರ್ 3ರಿಂದ 15ರವರೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. 12 ದಿನ, 12 ಗಂಟೆ ಮತ್ತು 12 ನಿಮಿಷಗಳ ನಿರಂತರ ಸಮೂಹ ಗಾಯನದ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಪ್ರಯತ್ನ ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೋ ಅವರು ತಿಳಿಸಿದ್ದಾರೆ.
ಅಕ್ಟೋಬರ್ 27ರಂದು ಮಂಗಳವಾರ ನಗರದ ಹೊಟೇಲ್ ಗೋಲ್ಡ್ ಫಿಂಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದ ವಿವಿಧ ಭಾಗಗಳಲ್ಲಿರುವ ಕೊಂಕಣಿ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಂಗೀತದ ಮೂಲಕ ಕೊಂಕಣಿ ಭಾಷೆಯ ಅಭಿಮಾನವನ್ನು ಬೆಳೆಸುವುದು ಹಾಗೂ ಅದರ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
1986ರಲ್ಲಿ ಆರಂಭವಾದ ಮಾಂಡ್ ಸೊಭಾಣ್, ಕೊಂಕಣಿ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಗೀತದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಸಂಘಟನೆಯ ಗುರಿಕಾರರಾಗಿದ್ದ ದಿವಂಗತ ಎರಿಕ್ ಒಝೇರಿಯೊ ಅವರ ಸ್ಮರಣಾರ್ಥ ಈ ಮಹಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ಗಿನ್ನೆಸ್ ವಿಶ್ವ ದಾಖಲೆಗೆ 6,789ಕ್ಕೂ ಅಧಿಕ ಗಾಯಕರು!:
ನವೆಂಬರ್ 3ರಂದು ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿರುವ ‘ಕೊಂಕಣಿ ನಿರಂತರಿ – ಸಂಸಾರ್ ಸರಾಸರಿ’ ಎಂಬ ಹೆಸರಿನ ಸಮೂಹ ಗಾಯನ ಕಾರ್ಯಕ್ರಮವು ನವೆಂಬರ್ 15ರಂದು ಸಂಜೆ 6.12ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ನಿರಂತರವಾಗಿ ಹಾಡುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಭಾರತ, ಆಸ್ಟ್ರೇಲಿಯಾ, ಕುವೈತ್, ಓಮನ್ ಮತ್ತು ಖತಾರ್ ಸೇರಿದಂತೆ ವಿವಿಧ ದೇಶಗಳ ಗಾಯಕರು ಈ ಪ್ರಯತ್ನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೈಸ್ತ, ಜಿ.ಎಸ್.ಬಿ., ಕುಡಾಲ್ ದೇಶಸ್ಥ, ಖಾರ್ವಿ, ಕುಡುಮಿ, ಸಿದ್ದಿ, ನವಾಯತಿ, ಸಿರಿಯನ್ ಕ್ರೈಸ್ತ ಸೇರಿದಂತೆ ವಿವಿಧ ಸಮುದಾಯಗಳ ಗಾಯಕರು ಹಾಗೂ ಇತರ ಭಾಷಿಕರೂ ಭಾಗವಹಿಸಲಿದ್ದಾರೆ.
6,789ಕ್ಕೂ ಅಧಿಕ ಗಾಯಕರು, 250ಕ್ಕೂ ಹೆಚ್ಚು ಸಂಗೀತ ಸಂಯೋಜಕರು ರಚಿಸಿರುವ 4,500ಕ್ಕೂ ಅಧಿಕ ಕೊಂಕಣಿ ಹಾಡುಗಳನ್ನು ಹಾಡಲಿದ್ದಾರೆ. ಒಟ್ಟು 300 ತಂಡಗಳು ತಲಾ ಒಂದು ಗಂಟೆಯ ಅವಧಿಯಲ್ಲಿ ಗಾಯನ ಪ್ರದರ್ಶಿಸಲಿದ್ದು, ಯಾವುದೇ ಗಾಯಕರು ಪುನರಾವರ್ತನೆಯಾಗದಂತೆ ಯೋಜನೆ ರೂಪಿಸಲಾಗಿದೆ. ಸಂಗೀತ ಗುರು ಜೊಯೆಲ್ ಪಿರೇರಾ ಈ ದಾಖಲೆಯ ಪ್ರಯತ್ನದ ಪ್ರಧಾನ ಸಂಗೀತ ನಿರ್ದೇಶಕರಾಗಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಾಗಿ ಲಂಡನ್‌ನ ಕಚೇರಿಯಲ್ಲಿ ನೋಂದಣಿ ಮಾಡಲಾಗಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಉದ್ಘಾಟನೆ:
ನವೆಂಬರ್ 3ರಂದು ಬೆಳಿಗ್ಗೆ 5 ಗಂಟೆಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸಲಿದ್ದಾರೆ.

ಕೊಂಕಣಿ ಸಂಗೀತದ ವಿವಿಧ ಆಯಾಮಗಳ ಕುರಿತು 12 ವಿಚಾರಗೋಷ್ಠಿಗಳು:
ಸಮ್ಮೇಳನಕ್ಕೆ ಶೈಕ್ಷಣಿಕ ಹಾಗೂ ಅಂತರರಾಷ್ಟ್ರೀಯ ಆಯಾಮ ನೀಡುವ ನಿಟ್ಟಿನಲ್ಲಿ 12 ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಭಕ್ತಿ ಸಂಗೀತ – ಗೋವಾ (ವಂದನೀಯ ಫಾದರ್ ಒನೆಸಿಸ್ ಡಿಕ್ರೂಜ್), ಕೊಂಕಣಿ ಭಕ್ತಿ ಸಂಗೀತ – ಮಂಗಳೂರು ಮತ್ತು ಇತರೆಡೆ (ವಂದನೀಯ ಫಾದರ್ ಜಯಪ್ರಕಾಶ್ ಡಿಸೋಜ), ಕೊಂಕಣಿ ಜನಪದ ಸಂಗೀತ – ಗೋವಾ (ಡಾ. ಕೊಸ್ಮೊ ಫೆರ್ನಾಂಡಿಸ್), ಕೊಂಕಣಿ ಜನಪದ ಸಂಗೀತ – ಮಂಗಳೂರು ಮತ್ತು ಇತರೆಡೆ (ಡಾ. ಪ್ರೀತಿ ಕೀರ್ತಿ ಡಿಸೋಜ). ಆರೋಗ್ಯಕ್ಕಾಗಿ ಸಂಗೀತ (ಅಂಕುಶ್ ನಾಯಕ್), ಅಂತರರಾಷ್ಟ್ರೀಯ ಸಂಗೀತ (ಡಾ. ಪಾವ್ಲೊ ಪಚಿಯೊಲಾ), ಬಾಯ್ಲಾ ಸಂಗೀತ (ಆಲ್ವಿನ್ ಫೆರ್ನಾಂಡಿಸ್), ಸಂಗೀತಗಾರರು ಮತ್ತು ಅವರ ರಚನೆಗಳು (ನೀತಾ ರೆಬೆಲ್ಲೊ), ರಂಗಭೂಮಿ ಮತ್ತು ಸಿನೆಮಾ ಸಂಗೀತ (ಕ್ಯಾಜಿಟನ್ ಡಾಯಸ್), ಮಾಂಡ್ ಸೊಭಾಣ್ ಸಂಗೀತದ ಪ್ರಭಾವ (ವಂದನೀಯ ಡಾ. ಆಲ್ವಿನ್ ಸೆರಾವೊ), ಬೌದ್ಧಿಕ ಆಸ್ತಿ ಹಕ್ಕುಗಳು (ಡಾ. ಸಾಯೊನಾರಾ ಟೆಲ್ಲೆಸ್), ಯಾಂತ್ರಿಕ ಬುದ್ದಿಮತ್ತೆ ಮತ್ತು ಸಂಗೀತ (ವಂದನೀಯ ಡಾ. ವಿಕ್ಟರ್ ಫೆರಾವೊ) ಪ್ರಬಂಧ ಮಂಡಿಸಲಿದ್ದಾರೆ.
ಗೋವಾ ಹಾಗೂ ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಕೊಂಕಣಿ ಸಂಗೀತ ಪರಂಪರೆ, ಅದರ ಬೆಳವಣಿಗೆ ಮತ್ತು ಭವಿಷ್ಯದ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ.


12 ಹಿರಿಯ ಸಂಗೀತ ಸಾಧಕರಿಗೆ ಗೌರವ:
ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ 12 ಸಾಧಕರಿಗೆ ‘ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಇವರಲ್ಲಿ ಐವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಗೌರವಕ್ಕೆ ಆಯ್ಕೆಯಾದವರಲ್ಲಿ ದಿವಂಗತ ಕ್ರಿಸ್ ಪೆರಿ, ಲಾರೆನ್ಸ್ ಸಲ್ಡಾನ್ಹಾ, ವಂದನೀಯ ಫಾದರ್ ಲಿನೊ ಡೆಸಾ, ದಿವಂಗತ ವಸಂತಿ ಆರ್. ನಾಯಕ್, ದಿವಂಗತ ಆಲ್ಫ್ರೆಡ್ ರೋಸ್, ಶ್ರೀಧರ್ ಖಾರ್ವಿ, ಮೆಲ್ವಿನ್ ಪೆರಿಸ್, ನೇಮಿರಾಜ ಗೌಡ, ದಿವಂಗತ ಜೆರೊಮ್ ಡಿಸೋಜ, ಮಾಮ್ದು ಇಬ್ರಾಹಿಂ, ದಿವಂಗತ ಉಲ್ಲಾಸ್ ಬುಯಾಂವ್ ಮತ್ತು ಜುಲಿಯಾನ ಸಿದ್ದಿ ಸೇರಿದ್ದಾರೆ.

ಮಕ್ಕಳಿಗಾಗಿ ‘ಫುಲ್ ಫುಲೊತಾ’ ಸಂಗೀತ ಸಂಜೆ:
10ರಿಂದ 16 ವರ್ಷ ವಯಸ್ಸಿನ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನವೆಂಬರ್ 13ರಂದು ‘ಫುಲ್ ಫುಲೊತಾ’ ಎಂಬ ವಿಶೇಷ ಸಂಗೀತ ಸಂಜೆ ನಡೆಯಲಿದೆ. ಪುರಭವನದ ಎದುರಿನ ರಾಜಾಜಿ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೊಂಕಣಿ ಸಂಸ್ಕೃತಿ, ಆಹಾರ ವೈವಿಧ್ಯಕ್ಕೆ ವಿಶೇಷ ವೇದಿಕೆ:
ಸಮ್ಮೇಳನದ ಅಂಗವಾಗಿ ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತ, ಜನಜೀವನ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ವಸ್ತುಪ್ರದರ್ಶನ ಏರ್ಪಡಿಸಲಾಗುವುದು. ಕೊಂಕಣಿ ಸಂಗೀತಕ್ಕೆ ಕೊಡುಗೆ ನೀಡಿದ ಹಿರಿಯ ಹಾಗೂ ಕಿರಿಯ ಕಲಾವಿದರ ಪರಿಚಯ ಒಳಗೊಂಡ ‘ಕೀರ್ತಿ ಮಂದಿರ’ವೂ ಇರಲಿದೆ. ವಿವಿಧ ಕೊಂಕಣಿ ಸಮುದಾಯಗಳ ಸಾಂಪ್ರದಾಯಿಕ ಖಾದ್ಯಗಳನ್ನು ಪರಿಚಯಿಸುವ ಆಹಾರ ಮಳಿಗೆಗಳು ಸಾರ್ವಜನಿಕರಿಗೆ ಲಭ್ಯವಿರಲಿವೆ.

ನವೆಂಬರ್ 15ರಂದು ಸಮಾರೋಪ:
ನವೆಂಬರ್ 15ರಂದು ಸಂಜೆ 6.12ಕ್ಕೆ ನಿರಂತರ ಸಮೂಹ ಗಾಯನ ಮುಕ್ತಾಯಗೊಳ್ಳಲಿದ್ದು, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಮೂರು ಕೋಟಿ ರೂಪಾಯಿ ವೆಚ್ಚದ ಬೃಹತ್ ಸಾಂಸ್ಕೃತಿಕ ಪ್ರಯತ್ನ:
ಮಹಾ ಸಮ್ಮೇಳನದ ಪೂರ್ವಸಿದ್ಧತೆಗಾಗಿ ಸಾವಿರಾರು ಹಾಡುಗಳ ಸಂಗ್ರಹ ಮತ್ತು ಸಾಹಿತ್ಯದ ದಾಖಲೀಕರಣ, 300 ತಂಡಗಳ ರಚನೆ, ಹಾಡುಗಳ ಹಂಚಿಕೆ, ಗಾಯನಕ್ಕೆ ಅಗತ್ಯವಾದ ಮೈನಸ್ ಟ್ರ್ಯಾಕ್‌ಗಳ ಸಿದ್ಧತೆ, ಪೂರ್ವಾಭ್ಯಾಸದ ಮೇಲ್ವಿಚಾರಣೆಗಾಗಿ 40 ಸಹಾಯಕ ಸಂಗೀತ ನಿರ್ದೇಶಕರ ನೇಮಕ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ತಂಡಗಳ ಹಾಜರಾತಿ ಮತ್ತು ಘೋಷಣಾ ಪತ್ರಗಳ ದಾಖಲೀಕರಣ, ವಸತಿ, ಪ್ರಯಾಣ, ಊಟೋಪಚಾರ ಹಾಗೂ ಸ್ವಯಂಸೇವಕರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಒಟ್ಟು ಮೂರು ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿರುವ ಈ ಸಮ್ಮೇಳನವು ಕೊಂಕಣಿ ಸಂಗೀತದ ಬೆಳವಣಿಗೆಗೆ ಮತ್ತು ಮುಂದಿನ ಪೀಳಿಗೆಯಲ್ಲಿ ಭಾಷಾ ಅಭಿಮಾನ ಬೆಳೆಸಲು ಮಹತ್ವದ ಹೂಡಿಕೆಯಾಗಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳು ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ವರದಿ ಮಾಡಿ, ಸಮಾಜದ ಎಲ್ಲ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೋ, ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಹಾಗೂ ಗೋವಾ ಸಂಯೋಜಕ ಮೈಕಲ್ ಜೂಡ್ ಗ್ರೇಶಿಯಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




