ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ
ಆನ್‌ಲೈನ್ ವಂಚನೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ – ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಸಲಹೆ

ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಹಾಗೂ ಆನ್‌ಲೈನ್ ವಂಚನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ CAL, ಶಾಂತಿ ಮತ್ತು ನ್ಯಾಯ ಆಯೋಗ ಹಾಗೂ ಸಾಮಾಜಿಕ ಸಂವಹನ ಆಯೋಗದ ಸಹಯೋಗದಲ್ಲಿ, ಚರ್ಚ್ ಪ್ರದಾನ ಧರ್ಮಗುರು ವಂದನೀಯ ಫಾದರ್ ವಾಲ್ಟರ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಮತ್ತು ಉಪಾಧ್ಯಕ್ಷ ದೀಪಕ್ ಡಿಸೋಜ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಂತಿ ಮತ್ತು ನ್ಯಾಯ ಆಯೋಗದ ಜ್ಯೋತಿ ಹೆಲೆನ್ ಡಿಸೋಜ ಅವರು ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ವಂದನೀಯ ಫಾದರ್ ವಾಲ್ಟರ್ ಡಿಸೋಜ ಅವರು, ಅತಿಯಾದ ಆಸೆಗೆ ಒಳಗಾಗದೆ, ಅಡ್ಡದಾರಿಗಳ ಮೂಲಕ ಶ್ರೀಮಂತರಾಗುವ ಪ್ರಯತ್ನ ಮಾಡದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಮೊಬೈಲ್ ಅಪ್ಲಿಕೇಶನ್‌ಗಳು, ಸಾಮಾಜಿಕ ಜಾಲತಾಣಗಳು ಹಾಗೂ ಆನ್‌ಲೈನ್ ವಂಚನೆಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ ಅನೇಕರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.









ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ಅಗತ್ಯ – PI ಅನಂತ ಪದ್ಮನಾಭ

ಕದ್ರಿ ಠಾಣೆಯ ಪೊಲೀಸ್ ನಿರೀಕ್ಷರಾದ ಅನಂತ ಪದ್ಮನಾಭ ಅವರು ಮುಖ್ಯ ಜಾಗೃತಿ ಉಪನ್ಯಾಸ ನೀಡಿ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರು ಹಿಂಜರಿಯಬಾರದು. ಪೊಲೀಸರ ಮೇಲೆ ವಿಶ್ವಾಸವಿಟ್ಟು ತಕ್ಷಣ ದೂರು ನೀಡುವ ಮೂಲಕ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ಸಹಕರಿಸಬೇಕು ಎಂದು ಹೇಳಿದರು. ವಂಚಕರು ವಿಶ್ವಾಸಾರ್ಹ ವ್ಯಕ್ತಿಗಳಂತೆ ನಟಿಸಿ, ಮೊದಲು ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ಮಾತುಕತೆ ಆರಂಭಿಸುತ್ತಾರೆ. ಬಳಿಕ ಹಂತಹಂತವಾಗಿ ಜನರನ್ನು ತಮ್ಮ ಬಲೆಗೆ ಬೀಳಿಸಿ ಗೌಪ್ಯ ಮಾಹಿತಿ ಹಾಗೂ ಆರ್ಥಿಕ ವಿವರಗಳನ್ನು ಪಡೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.








“ಇಂದಿನ ಸಮಾಜದಲ್ಲಿ ಬಿಳಿ ಕಾಲರ್ ಅಪರಾಧಿಗಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು,” ಎಂದು ತಿಳಿಸಿದ ಅವರು, ವಿಶೇಷವಾಗಿ ಹಿರಿಯ ನಾಗರಿಕರು ಅಪರಿಚಿತ ಕರೆಗಳಿಗೆ ಪ್ರತಿಕ್ರಿಯಿಸುವಾಗ ಮತ್ತು ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಬೇಕು ಎಂದರು. ಸುಮಾರು ಒಂದು ಗಂಟೆ ನಡೆದ ಉಪನ್ಯಾಸದಲ್ಲಿ ಸ್ಥಳೀಯವಾಗಿ ನಡೆದ ವಿವಿಧ ಸೈಬರ್ ಅಪರಾಧ ಪ್ರಕರಣಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಅನುಮಾನಾಸ್ಪದ ಕರೆಗಳು, ಸಂದೇಶಗಳು ಹಾಗೂ ಆನ್‌ಲೈನ್ ಚಟುವಟಿಕೆಗಳನ್ನು ಗುರುತಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮಹತ್ವವನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ, ಸಹಾಯಕ ಉಪನಿರೀಕ್ಷಕರಾದ ಮನೋಹರ್, ಚಂದ್ರಹಾಸ್ ಸನಿಲ್ ಮತ್ತು ಸುಧಾಕರ್ ರಾವ್, ಹೆಡ್ ಕಾನ್‌ಸ್ಟೆಬಲ್ ಮಣಿಕ್ ನರೇನಾವರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶರಣಪ್ಪ ಮತ್ತು ಸುರೇಶ್ ಉಪಸ್ಥಿತರಿದ್ದರು. ಧರ್ಮಭಗಿನಿಯರು ಹಾಗೂ ಧರ್ಮಸಭೆಯ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಆಯೋಗದ ಮುಖ್ಯಸ್ಥ ಲಾಯ್ ರೇಗೊ ವಂದನಾರ್ಪಣೆ ಸಲ್ಲಿಸಿ, ಪೊಲೀಸ್ ಅಧಿಕಾರಿಗಳು, ಚರ್ಚ್ ಆಡಳಿತ ಮಂಡಳಿ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.





