November 21, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಲಯನ್ ಸಮುದಾಯ ಭವನದ ಕನಸಿಗೆ ಹೊಸ ಮುನ್ನುಡಿ – ‘ಕೃಷ್ಣ’ ವಾಣಿಜ್ಯ ಸಮುಚ್ಚಯಕ್ಕೆ ಶಿಲಾನ್ಯಾಸ

ಮಂಗಳೂರು: ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ–ಪಡೀಲ್‌ನ ಬಹುಕಾಲದ ಕನಸಾದ ‘ಲಯನ್ ಸಮುದಾಯ ಭವನ’ ನಿರ್ಮಾಣ ಯೋಜನೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಈ ಯೋಜನೆಗೆ ಪೂರಕವಾಗಿ ನಂತೂರು–ಕದ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣಗೊಳ್ಳಲಿರುವ ‘ಕೃಷ್ಣ’ ವಾಣಿಜ್ಯ ಸಮುಚ್ಚಯಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.

ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ಅಥರ್ವ ಬಿಲ್ಡರ್ಸ್’ನ ಮತ್ತೊಂದು ವಾಣಿಜ್ಯ ಯೋಜನೆಯಾಗಿರುವ ‘ಕೃಷ್ಣ’ ಸಮುಚ್ಚಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು, ಲೋಟಸ್ ಪ್ರಾಪರ್ಟೀಸ್ ಮತ್ತು ಅಥರ್ವ ಬಿಲ್ಡರ್ಸ್ ಸಂಸ್ಥೆಗಳು ಮಂಗಳೂರಿನಲ್ಲಿ ಹಲವಾರು ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕ ನಗರದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿವೆ. ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿರುವ ಈ ಸಂಸ್ಥೆಗಳ ಮತ್ತೊಂದು ಯೋಜನೆಯೂ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಂಸ್ಥೆಯ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ ಹಾಗೂ ಧನರಾಜ್ ಶೆಟ್ಟಿ ಅವರನ್ನು ಅಭಿನಂದಿಸಿದರು.

ಲಯನ್ ಸಮುದಾಯ ಭವನದ ಕನಸಿಗೆ ಸಾಕಾರ ರೂಪ:

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ–ಪಡೀಲ್‌ನ ಅಧ್ಯಕ್ಷ ಹಾಗೂ ಲಯನ್ಸ್ ಜಿಲ್ಲೆ 317Dಯ ಮಾಜಿ ಗವರ್ನರ್ ಲಯನ್ ಕೆ.ಸಿ. ಪ್ರಭು ಮಾತನಾಡಿ, 1978ರಲ್ಲಿ ಸ್ಥಾಪನೆಯಾದ ಲಯನ್ಸ್ ಕ್ಲಬ್ ಕಂಕನಾಡಿ–ಪಡೀಲ್ ಕಳೆದ 49 ವರ್ಷಗಳಿಂದ ಪರಿಸರದ ಜನರಿಗೆ ಹಲವು ಮಾನವೀಯ ಹಾಗೂ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಾ ಜನಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.

ಸಂಸ್ಥೆಯು ತನ್ನ ಸುವರ್ಣ ಮಹೋತ್ಸವದ ಸಂಭ್ರಮದತ್ತ ಸಾಗುತ್ತಿರುವ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಬಹುಕಾಲದ ಕನಸಾಗಿರುವ ‘ಲಯನ್ ಸಮುದಾಯ ಭವನ’ ಯೋಜನೆಯನ್ನು ಸಾಕಾರಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ‘ಕೃಷ್ಣ’ ವಾಣಿಜ್ಯ ಸಮುಚ್ಚಯದ ನಾಲ್ಕನೇ ಮಹಡಿಯನ್ನು ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ–ಪಡೀಲ್ ಖರೀದಿಸಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

ಈ ಮಹತ್ವದ ಯೋಜನೆ ಯಶಸ್ವಿಯಾಗಲು ಲಯನ್ಸ್ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳು ತನು, ಮನ, ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಮುದಾಯ ಭವನವು ಮುಂದಿನ ದಿನಗಳಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳಿಗೆ ಉಪಯುಕ್ತ ವೇದಿಕೆಯಾಗುವ ಆಶಯವನ್ನೂ ವ್ಯಕ್ತಪಡಿಸಿದರು.

‘ಕೃಷ್ಣ’ ವಾಣಿಜ್ಯ ಸಮುಚ್ಚಯದ ಕರಪತ್ರ ಬಿಡುಗಡೆ:

ಕಾರ್ಯಕ್ರಮದಲ್ಲಿ ‘ಕೃಷ್ಣ’ ವಾಣಿಜ್ಯ ಸಮುಚ್ಚಯದ ಯೋಜನಾ ಕರಪತ್ರವನ್ನು ಬಿಡುಗಡೆಗೊಳಿಸಿದ ಕೆನರಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅವರು, ಅಥರ್ವ ಬಿಲ್ಡರ್ಸ್‌ನ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ, ಧನರಾಜ್ ಶೆಟ್ಟಿ ಹಾಗೂ ಜಾಗದ ಮಾಲೀಕ ವಾಮನ ಶೆಣೈ ಅವರಿಗೆ ಶುಭ ಹಾರೈಸಿದರು. ನಿರ್ಮಾಣ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದು ಹಾರೈಸಿದ ಅವರು, ಸಮುಚ್ಚಯದಲ್ಲಿ ಈಗಾಗಲೇ ಮಳಿಗೆಗಳನ್ನು ಖರೀದಿಸಿರುವ ಗ್ರಾಹಕರನ್ನೂ ಅಭಿನಂದಿಸಿದರು.

ನಂತೂರು–ಕದ್ರಿ ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಈ ವಾಣಿಜ್ಯ ಸಮುಚ್ಚಯವು ನಗರದ ವಾಣಿಜ್ಯ ಚಟುವಟಿಕೆಗಳಿಗೆ ಮತ್ತೊಂದು ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ಅಥರ್ವ ಬಿಲ್ಡರ್ಸ್ ಸಂಸ್ಥೆಯ ಪರವಾಗಿ ಅಭಿಲಾಷ್ ಕಟೀಲ್ ವಂದಿಸಿದರು.

You may also like

News

ಸಚಿವ ಯು.ಟಿ. ಖಾದರ್ ಅವರಿಗೆ DAPC ನಿಯೋಗದ ಮನವಿ

ಕ್ರೈಸ್ತ ಸಮುದಾಯಕ್ಕೆ 3C ಮೀಸಲಾತಿ ಹಾಗೂ ನ್ಯಾಯಯುತ ಪ್ರಾತಿನಿಧ್ಯಕ್ಕೆ ಆಗ್ರಹ ಬೆಂಗಳೂರು: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರನ್ನು ಡಯಾಸಿಸ್ ಆಫ್ ಆಲ್
News

ನವಂಬರ್ 25ರಂದು ದಕ್ಷಿಣ ಕನ್ನಡದಲ್ಲಿ ಬೃಹತ್ ರಕ್ತದಾನ ಅಭಿಯಾನ; 14 ರಕ್ತನಿಧಿ ಕೇಂದ್ರಗಳಲ್ಲಿ ಶಿಬಿರ – ಡಾ. ಎಚ್.ಆರ್. ತಿಮ್ಮಯ್ಯ

ಮಂಗಳೂರು: ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಯಾವುದೇ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ಮಾನವೀಯ ಆಶಯದೊಂದಿಗೆ ನವೆಂಬರ್ 25ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ

You cannot copy content of this page